Sunday, 12 May 2019

ಯುಧ್ಧ - ಹಸಿವ ಸಂರಕ್ಷಕರು

ಇತ್ತೀಚೆಗೆ ಎಲ್ಲಿ ನೋಡಿದರಲ್ಲಿ ಈ ಕೆಂಪು, ಕೇಸರಿ ಪಡೆಗಳದ್ದೇ ರಾಜ್ಯ, ಇವರದ್ದೇ ದರ್ಬಾರು. ನನ್ನ ದೈನಂದಿನ ರಣರಂಗದಿಂದ ನನ್ನ ಮನೆಯವರೆಗಿನ ದಾರಿಯುದ್ದಕ್ಕೂ ನಿಂತಿರುತ್ತಾರೆ. ಒಮ್ಮೊಮ್ಮೆ ಒಬ್ಬರೇ ಒಮ್ಮೊಮ್ಮೆ ಗುಂಪಾಗಿ. ಇದನ್ನೆಲ್ಲಾ ನೋಡುತ್ತಿದ್ದರೆ ಏನೋ ಸಂಚು ನಡೆಯುತ್ತಿರುವುದು ಖಚಿತ. ಶತ್ರು ದೇಶದವರು ನಮ್ಮ ದೇಶದೊಳಗೆ ನುಗ್ಗಿ ನಮ್ಮನ್ನೇ ಹೊಡೆಯುವ ಸಂಚು ಮಾಡಿರುವಂತಿದೆ. ಹೀಗೆ ಯೋಚಿಸುತ್ತಿರುವಾಗಲೇ ಒಬ್ಬ ನನ್ನ ರಥದ ಪಕ್ಕದಿಂದ ಸರಕ್ಕನೆ ಸರಿದು ಹೋದರೆ, ಇನ್ನೊಬ್ಬ ಹಿಂದಿನಿಂದ ಜೋರಾಗಿ ಘಂಟೆ ಬಾರಿಸುತ್ತ ದಾರಿ ಕೇಳುತ್ತಿದ್ದ. ತರಲೆಯೇ ಬೇಡವೆಂದು ನನ್ನ ರಥವನ್ನು ರಸ್ತೆಯ ಪಕ್ಕಕ್ಕೆ ಸರಿಸಿದರೆ ಏನೋ ತುರ್ತಿದ್ದಂತೆ, ಯಾರದೂ ಗುರ್ತಿಲ್ಲದಂತೆ ಈ ಕೆಂಪು, ಕೇಸರಿ, ಕಪ್ಪು ಸವಾರರು ಮುನ್ನುಗ್ಗಿ ಹೋದರು. "ಏ, ಯಾರ ಮೇಲೆ ದಂಡೆತ್ತಿ ಹೋಗುತ್ತಿರುವಿರಿ?" ಎಂದು ಬೆಂಬತ್ತಿ ಕೇಳೋಣವೆಂದುಕೊಂಡೆ. ಆದರೆ ನನಗೆಲ್ಲಿ ಆ ಧೈರ್ಯ. ನನ್ನ ದೈನಂದಿನ ಯುದ್ಧದಿಂದಲೇ ಕಂಗಾಲಾದ ನನಗೆ ಮೊದಲೇ ಹೊಟ್ಟೆ ಚುರುಗುಟ್ಟುತ್ತಿತ್ತು.
ಅಷ್ಟರಲ್ಲಿ ಇನ್ನೊಬ್ಬ ಸರಕ್ಕನೆ ನನ್ನ ಪಕ್ಕದಿಂದ ಮುಂದೆ ಹೋದ. ಅವನ ವಾಹನದ ಹಿಂದೆ ಒಂದು ಚಿಕ್ಕ ಮೂಟೆಯೊಂದಿತ್ತು. ನನ್ನೆದೆ ಧಸಕ್ಕೆಂದಿತ್ತು. ಈ ಸಲದ ಸಂಚು ಬಲವಾಗೇ ಇರುವಂತಿದೆ. ನಗರದ ಮೂಲೆ ಮೂಲೆಯನ್ನು ಬಾಂಬುಗಳಿಂದ ಸಿಡಿಸುವ ಯೋಜನೆಯೇ ಇರಬೇಕು. ಅವನ ಬೆನ್ನೆಲ್ಲೇನೋ ಅಕ್ಷರಗಳು ಅಚ್ಚಾಗಿದ್ದವು. ಕಣ್ಣರಳಿಸಿ ನೋಡಿದರೆ 'ಹೌದು' ಬರೆದಿದೆ ಸೈನಿಕನೆಂದು. ಅವನು ಹಸಿವ ಸಂರಕ್ಷಕ. ಅದನ್ನೋದಿ ಇವನೆಲ್ಲೋ ನನ್ನನ್ನು ತಿಂದು ಬಿಡುತ್ತಾನೆಂದು ಭಯವಾಯಿತು. ಹಸಿದ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರುವಂತೆ ಒಮ್ಮೆಲೇ ನಡುಕ ಹುಟ್ಟಿತು. ಆದರೂ ಧೈರ್ಯ ಮಾಡಿ ಕೇಳಿಯೇ ಬಿಟ್ಟೆ, "ಏ ಗುರು, ಎಲ್ಲಿ ಅವಸರದಲ್ಲಿ ಓಡುತ್ತಿದ್ದೀಯಾ?". ಅವನೋ, "ನಿಲ್ಲಿಸಬೇಡ ನನ್ನ. ನನಗೆ ತುರ್ತಿದೆ. ನನ್ನ ಹಿಂದಿರುವ ಮೂಟೆಯನ್ನು ನಾನು ಬೇಗನೆ ಒಂದು ವಿಳಾಸಕ್ಕೆ ಸಮಯದಲ್ಲಿ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ನನ್ನ ಹೊಟ್ಟೆಗೆ ಕನ್ನ ಬಿದ್ದೀತು" ಎಂದ. ನಾನೋ ಇವನು ಎಲ್ಲರ ಕಥೆ ಮುಗಿಸುವ ರಾವಣನೆಂದು ಕೊಂಡಿದ್ದರೆ, ತನ್ನದೇ ಕಥೆ ಮುಗಿಯುವುದೆನ್ನುವ ಸುಗ್ರೀವನಾದನಲ್ಲಪ್ಪ ಇವನು ಎಂದು ಕೊಂಡು ಕೇಳಿದೆ, "ಹೊ ಹೌದೋ. ಅಲ್ಲಿ ಯಾರು ಶಬರಿ ಕಾಯುತ್ತಿರುವಳೇ ನಿನ್ನನ್ನು?". ಅವನು, "ಹೌದು ಶಬರಿಯೇ ಕಾಯುತ್ತಿದ್ದಾಳೆ. ಆದರೆ ರಾಮನಿಗಾಗಿ ಅಲ್ಲ. ನನ್ನ ಈ ಮೂಟೆಯಲ್ಲಿರುವ ತಿನ್ನದೇ ಬೆಂದ ಈ ಬುಗುರಿಗಳಿಗಾಗಿ. ಅವಳು ಹಸಿದಿದ್ದಾಳೆ. ನಾನಿದನ್ನು ಅವಳಿಗೆ ಆದಷ್ಟು ಬೇಗ ತಲುಪಿಸಬೇಕು." ನನಗದನ್ನು ಕೇಳಿ ಆನಂದ ಭಾಷ್ಪಗಳು ಉದುರುವುದಷ್ಟೇ ಬಾಕಿ. ಹಾಗೆಯೇ ಬಾಯಿಗೆ ಬಂದ ಉಗುಳನ್ನು ನುಂಗಿ, "ಆಹಾ ಒಳ್ಳೆಯದೇ ಆಯಿತು. ನನಗು ತುಂಬಾ ಹಸಿವಾಗಿದೆ. ಅದರಲ್ಲೇ ಸ್ವಲ್ಪ ಬುಗುರಿಗಳನ್ನು ಕೊಟ್ಟು ಬಿಡು. ನಿನಗೆ ನೂರು ಜನ್ಮಗಳ ಪುಣ್ಯ ಬರುತ್ತದೆ. ರಾಮ ಮುಟ್ಟಿದಾಗ ಅಹಲ್ಯೆಯ ಶಾಪ ತೊಲಗಿದಂತೆ, ನನ್ನ ಹೊಟ್ಟೆಯೊಳಗಿನ ಅಸಿಡಿಟಿಯು ತೊಲಗುತ್ತದೆ." ಎಂದು ಹೇಳಿದೆ. ಅದಕ್ಕವನು, "ಹಾಗೆಲ್ಲ ನಡೆಯುವುದಿಲ್ಲ. ನಾನು ನಿನ್ನ ಸೈನಿಕನಲ್ಲ. ನಿನಗಾಗಿ ಬೇರೆಯೇ ಸೈನಿಕನಿರುವನು. ನೀನು ಮೊದಲೆ ಆದೇಶವನ್ನು ನಿನ್ನ ದೂರಯಂತ್ರದ ಮೂಲಕ ಕಳುಹಿಸಿದ್ದರೆ, ಆಹಾರವನ್ನು ನಿನ್ನ ಸೈನಿಕ ನಿನಗೆ ಒಪ್ಪಿಸುವನು. ನನ್ನನ್ನು ಬಿಟ್ಟು ಬಿಡು. ನನ್ನ ಆದೇಶಕರಿಂದ ಇನ್ನೊಮ್ಮೆ ಕರೆ ಬರುವ ಮೊದಲೆ ನಾನಲ್ಲಿರುವುದು ಒಳ್ಳೆಯದು." ಎಂದು ಹೇಳಿ ಹೊರಟೇ ಬಿಟ್ಟ. ನಾನೋ ಆ ಕ್ಷಣದಲ್ಲಿ ಲಕ್ಷ್ಮಣರೇಖೆಯೊಳಗಿನ ಸೀತೆಯಾದೆ. ಈ ಕಡೆಯಿಂದ ನನ್ನ ಹಸಿವು ನನ್ನನ್ನು ಚೂರುಚೂರಾಗಿ ಕೊಲ್ಲುತ್ತಿದ್ದರೆ, ನನ್ನ ಸುತ್ತು ಮುತ್ತಲಿನ ಈ ಸೈನಿಕರು ಸಂರಕ್ಷಣೆಯಿರಲಿ ಯಾವ ರೀತಿಯ ಸಹಾಯವನ್ನೂ ಮಾಡದೆ ಪಾಲುಪಾಲಾಗಿ ಕೊಲ್ಲುತ್ತಿದ್ದರು. ಅಷ್ಟರಲ್ಲಿ ನನ್ನ ದಾರಿಯಲ್ಲಿ ಒಂದು ದರ್ಶಿನಿಯ ದರ್ಶನವಾಯಿತು. ನನಗೋ ಸ್ವರ್ಗದಷ್ಟೇ ಖುಷಿಯಾಯಿತು.
ನನ್ನ ರಥವನ್ನು ಮಾರ್ಗದ ಪಕ್ಕದಲ್ಲಿಟ್ಟು ದರ್ಶಿನಿ ಹೊಕ್ಕರೆ ನೋಡುವುದೇನು, ಈಡಿ ದರ್ಶಿನಿಯನ್ನು ಈ ಸಂರಕ್ಷಕರೇ ಮುತ್ತಿಗೆ ಹಾಕಿದ್ದರು. ನನಗೇಕೋ ದೇಶದಲ್ಲಿ ಪುನಃ ಎಮರ್ಜೆನ್ಸಿ ಹಾಕಿದ್ದಾರೋ ಏನೋ ಎನ್ನುವ ಅನುಮಾನ ಬಂತು. ನಾನು ತಿನ್ನುವ ಆಹಾರಕ್ಕೆ ಮುತ್ತಿಗೆ ಹಾಕಿದ್ದಾರೆಂದ ಮೇಲೆ ಇನ್ನು ಉಳಿದಿರಿವುದಾದರೂ ಏನು. ಆದರೆ ಕೌಂಟರ್ ನಲ್ಲಿ ತನ್ನ ಶಕ್ತಿಯ ಬಗ್ಗೆ ತಿಳಿಯದ ಹನುಮನಂತೆ ಕ್ಯಾಷಿರ್ ಹಾಯಾಗಿ ಕುಳಿತಿದ್ದ. ಅವನೆದುರು ನೋಟನ್ನು ಹಿಡಿದು, "ಏನಿದೆ ಊಟಕ್ಕೆ? ಗ್ರಾಹಕರಿಗೆ ಊಟ ಉಂಟೋ? ಇಲ್ಲ ಈ ಕಪ್ಪು, ಕೆಂಪು, ಕೇಸರಿ ಪಡೆಗಳೇ ಊಟವನ್ನು ಮುಗಿಸಿರುವರೋ?" ಎಂದೆ. ಅವನು ನಗುತ್ತ, "ಇಲ್ಲ ಸಾರ್, ಇವರೇನು ನಿಮ್ಮ ಶತ್ರುಗಳಲ್ಲ. ಇವರೂ ನಿಮ್ಮ ಹಾಗೆ ಗ್ರಾಹಕರು. ಆದರೆ ಇವರು ಊಟ ಮಾಡುವುದಿಲ್ಲ. ಬದಲಿಗೆ ನಿಮ್ಮ ಮನೆಗೆ ಊಟ ತಂದು ಒಪ್ಪಿಸುವ ಹಸಿವ ಸಂರಕ್ಷಕರು. ನಿಮಗೇನು ಬೇಕೋ ಹೇಳಿ? ಚೈನೀಸ್, ಆಂಧ್ರ, ಕೋಸ್ಟಲ್ ಎಲ್ಲ ಇದೆ" ಎಂದ. ನನಗಂತೂ ಹೊಟ್ಟೆಯೊಳಗಿನ ಚಿಟ್ಟೆಗಳು ನವಿಲುಗಳಾಗುವುದೇ ಬಾಕಿ, ಊಟಕ್ಕೆ ಮೊದಲೆ ಸಕ್ಕರೆ ತಿಂದು ಹಾಲು ಕುಡಿದಷ್ಟೇ ಖುಷಿಯಾಗಿತ್ತು.

No comments:

Post a Comment