Sunday, 3 September 2017

ಮಿಂಚು

ಹಕ್ಕಿ ಚುಕ್ಕೆ

ಹಕ್ಕಿ ಚುಕ್ಕೆ
ಸುತ್ತ ಮುತ್ತ ಇರುವ ಕಾಳ ಹೆಕ್ಕಿ
ಚಿಕ್ಕ ಪುಟ್ಟ ನೆನಪೆ ಬಾಳ ಹಕ್ಕಿ
ಕೊರೆಕೊರೆದು ಮರದ ಕಾಂಡ ಕುಕ್ಕಿ
ತಿರುತಿರುಗಿಸಿ ನೆನಪಿನಾಳದ ಚಕ್ಕಿ
ಮನಬಂದಂತೆ ಇಡುತಲಿಹುದು ಹಿಕ್ಕೆ
ಅಂಜಿದ ಮನ ತೊರದಿರಲು ದಿಕ್ಕೆ
ಬ್ರಹದಂಬರದಿ ಬೀಸಿ ಬಂದು ರೆಕ್ಕೆ
ಜೀವಸಾಗರದಿ ಈ ಬಾಳೊಂದು ಚುಕ್ಕೆ

ಕಲೆ ಹಾಕಿದೆನೆ ನಾ

ಕಲೆ ಹಾಕಿದೆನೆ ನಾ
ಯಾರು ಕಲಿಸಿದರೊ ನನಗೆ ಈ ಕಲೆ ಹಾಕುವ ಕಲೆಯ?
ಕಲೆಹಾಕಿದೆ ನಾ stampಗಳ coinಗಳ ಎಲೆಗಳ ಚಿಪ್ಪುಗಳ...
ಕಲೆಹಾಕಿದೆ ನಾ ಹೊಗಳಿಕೆಯ ತೆಗಳಿಕೆಯ ಘಳಿಗೆಗಳ ನೆನಪುಗಳ...
ಸುತ್ತಲೆಲ್ಲ ತುಂಬಿವೆ ಈ
ಸಾಮಾನುಗಳು ನೆನಪುಗಳು
ಆದರೂ ನಾ ಕುಳಿತಿರುವೆ ಒಂಟಿಯಾಗಿ
ಬಹುಶಃ ಮರೆತೆನೆ ನಾ
ಕಲೆಹಾಕಲು ಸಂಬಂಧಗಳ...

ನನ್ನನ್ನೆ ನಾ ಕಂಡು ಕೊಂಡೆ

ನೀ ಕರೆದಾಗ ಓಗೊಟ್ಟು ನಾ ಹತ್ತಿರಕೆ ಬಂದಾಗ
ನನ್ನ ಹೊಸಪರಿಚಯವ ನೀ ನನಗೆ ಮಾಡಿಸಿದೆ
ನೀ ನೋವಲ್ಲಿ ಬೆಂದಿರುವಾಗ, ನಾ ಸಾಂತ್ವನವ ಹೇಳಲು
ನನ್ನ ಹೊಸ ಮಗ್ಗುಲನೆ ನಾ ಕಂಡು ಕೊಂಡೆ ||
ನಿನ್ನ ಆಳವನರಿಯಲು ನಾ ಆಳಕ್ಕೆ ಇಳಿದಾಗ
ನಿನ್ನ ಎತ್ತರವ ತಿಳಿಯಲು ನಾ ಎತ್ತರಕ್ಕೇರಿದಾಗ
ಪರದೆಗಳು ಸರಿದು ಪರಿಧಿಗಳ ದಾಟಿ
ನನ್ನ ಹೊಸ ಪರಿಭಾಷೆಯ ನಾ ಕಂಡು ಕೊಂಡೆ ||
ನಿನ್ನನ್ನೆ ನೋಡುತ್ತಾ, ನಿನ್ನನ್ನೆ ಕೇಳುತ್ತ, ನನ್ನೇ ನಾ ಕಂಡೆ
ಪ್ರೀತಿಯ ಮಾಡುತ್ತಾ, ಮತ್ತೆ ಕಾದಾಡುತ್ತ, ನೀ ಕನ್ನಡಿಯಾಗಿ ನಿಂತೆ
ನಿನ್ನ ತಿಳಿಯಲು ಹೊರಟ ನಾ ನನ್ನನ್ನೆ ತಿಳಿದೆ
ನಿನ್ನ ಹುಡುಕಲು ಹೊರಟ ನನ್ನನ್ನೆ ನಾ ಕಂಡು ಕೊಂಡೆ ||

- Inspired by talks and books on Relationship by J Krishnamurthy

ಮುಂಗಾರು ಮಳೆ

ಕಾಗದದ ದೋಣಿ ನಾ
ಹರಿವ ಈ ತೊರೆಗೆ
ಮಣ್ಣಿನಾ ಕಂಪು ನಾ
ನಿಂತ ಈ ನೀರಿಗೆ
ಹರಿವ ಈ ಹೊಳೆಯು ನಾ
ಭೋರ್ಗರೆವ ಮಳೆಗೆ
ಬಿರಿದ ಈ ಹೂವು ನಾ
ಆಹಾ ಗಾಳಿ ಚಳಿಗೆ
ಗೂಡಲ್ಲಿ ಬಂಧಿ ನಾ
ಬೀಸುವ ಗಾಳಿಗೆ
ಹೆದರು ಹಕ್ಕಿಯಾದೆ ನಾ
ಕೇಳಿದ ಆ ಗುಡುಗಿಗೆ
ನೀರಿನ ಹನಿಯು ನಾ
ಮುಂಗಾರು ಮಳೆಗೆ

ಲಗೋರಿ

ಕಲ್ಲ ಮೇಲೊಂದು ಕಲ್ಲಿನ ಗೋರಿ, ಅದನುರುಳಿಸಿದೆ ಬಾಲೊಂದು ತೂರಿ
ಚಂಗನೆ ಹಾರಿ ಓಡಿದೆ ಪುಟಾಣಿ ಸೈನ್ಯ, ಬೆನ್ನಟ್ಟಿದೆ ಹಿಂದಕೆ ಚಿಣ್ಣರ ಸೈನ್ಯ
ಮತ್ತೆ ಕಟ್ಟಲು ಗೋರಿಯ, ನಾಯಕನೊಬ್ಬ ಬಂದಿಹನು
ಎಸೆದಿಹನು ಬಾಲನ್ನು, ಎದುರು ಪಾಳಿಯ ಧಾಂಡಿಗನು
ಬಾಲಿನ ಪೆಟ್ಟನು ತಪ್ಪಿಸಲು, ನೆಲಕ್ಕೆರಗಿದ ನಾಯಕನು
ದೂರದಿ ಬಾಲು ಓಡಿಹಲು, ಗೋರಿಯ ಮತ್ತೆ ಕಟ್ಟಿದನು
ಎಲ್ಲೆಡೆ ಹೊಯ್ ಹೊಯ್ ಸದ್ದಿಹುದು
ಸೈನ್ಯವು ಹಾರುತ ಓಡಿಹುದು
ಈ ಪಾಳಿಯು ನಿಲ್ಲದು ಬಾಲನ್ನು ತಪ್ಪಿಸಿ ಗೋರಿಯ ಕಟ್ಟುವ ತನಕ
ಆ ಪಾಳಿಯ ಚಿಣ್ಣರಿಗೆ ಬಾಲಿಂದ ಹೊಡೆಸಿ ಸೋಲಿಸುವ ತವಕ
ಕೊನೆಯ ಕಲ್ಲು ಕುಳಿತಿಹುದು, ಗೋರಿಯ ತಲೆಯ ಮೇಲಕೆ ಹಾರಿ
ಗೆದ್ದ ಪಾಳಿಯ ಕಿರುಚಾಟ ತಾರಕಕೆರಿಹುದು, ಲಗೋರಿ ಲಗೋರಿ.

ಜಲಪಾತ

ಜಲಪಾತ
ಮಂಜು ಕೊಡಚಾದ್ರಿಯ ಬೆಟ್ಟಗಳ
ಮಾಡಿಹೆ ಮನೆ...
ನೀರಹನಿಗಳು ಹೊರಟಿವೆ ಧರೆ 
ಸೇರಲು ಚಿಟಪಟನೆ...
ತಂಗಾಳಿಯು ಮೈಯ ಸೋಕಲು
ನಡುಗಿಹೆನು ಮೆಲ್ಲನೆ...
ಹನಿಗಳನು ನೆಂಟರೆಂದು ಜೀರುಂಡೆಗಳು
ಕರೆದಿಹುದು ಜೀರ್ರನೆ...
ಇವೆಲ್ಲದರ ಪರಿವೆಯೇ ಇಲ್ಲದೆ
ಧುಮುಕಿಹುದು ಭೂಮಿಗೆ
ಹಿದ್ಲುಮನೆ.

ಈ ಮಧ್ಯಾನ್ನ...

ಈ ಮಧ್ಯಾನ್ನ...
ಹೊರಗೆ ಭೋರ್ಘರೆವ ಮಳೆ, ಒಳಗೆ ಮಂಪರಿನ ಎಳೆ
ಬಾನಲಿ ಕಾರ್ಮೋಡಗಳ ಸುಳಿ, ಮೈಯ್ಯೆಲ್ಲ ಭಾರವಾದ ಚಳಿ
ಅಂಗಳದಿ ತೊಯ್ದ ಮಣ್ಣ ವಾಸನೆ, ಕಣ್ಣಲಿ ಅಮಲು ಮಾಡಿದೆ ಮನೆ
ಯಾಕಿಂದು ಪ್ರಕ್ರತಿಯು ಸುರಿಸಿಹಳು ಪ್ರೀತಿ?
ಪ್ರಿಯತಮೆಯು ಪಾಯಸವ ಕುಡಿಸಿದಾ ರೀತಿ!!!

ಯವನಿಕೆಯು ಸರಿದಾಗ

ಯವನಿಕೆಯು ಸರಿದಾಗ...
ಮೂಡಿತ್ತು ಬೆಳಕು ವೇದಿಕೆಯಲಿ
ಏರಿತ್ತು ರಂಗು ಮುಖದಲಿ
ಮಿಂಚಿತ್ತು ಹೊಳಪು ಕಣ್ಣಿನಲಿ 
ಮೀರಿತ್ತು ಉತ್ಸಾಹ ಎದೆಯಲಿ
ಚೀರಿತ್ತು ತವಕದಿ ಕಂಠವು
ಸೂಸಿತ್ತು ಎಲ್ಲೆಡೆ ಸಂಗೀತವು
ಜಾರಿತ್ತು ಪರಿವೆಯಿಲ್ಲದೆ ಸಮಯವು
ಸಾಗಿತ್ತು ಜೀವನದ ನಾಟಕವು
ಯವನಿಕೆಯು ಇಳಿದಾಗ...
ಏಲ್ಲವೂ ಸ್ತಬ್ಧ!!!

ವಿಸರ್ಜನೆ

ಹೊರಟಿಹುದು ಮೆರವಣಿಗೆ ಗಣೇಶನ ಹೊತ್ತು
ಡೋಲು, ಚಂಡೆ, ಜೋರಾದ ಜಾಗಟೆ ಅವನೊಡನೆ ಇತ್ತು
ಗಣನಾಯಕನ ಗುಣಗಾನ, ಹಾಡುಗಳ ಸದ್ದು
ಮದವೇರಿದ ನರ್ತನ, ಹಿಂಡಿನ ಚೀರಾಟವಿದ್ದು
ನೀಡಿಹರು ವಂದನೆಯ ಸಾಲಾಗಿ ನಿಂತವರು
ಈ ಸಲದ ಪಯಣಕೆ ಇನ್ನೂ ಜನ ಬರುತಿಹರು

ಇವೆಲ್ಲಕ್ಕೂ ತನಗೂ ಇಲ್ಲದಂತೆ ಸಂಭಂದ
ಕುಳಿತಿಹನು ಅವನು ಹಾಗೆ ನಿರ್ಲಿಪ್ತ
ಕೊನೆಯ ಪಯಣವೇ ಹಾಗೆ, ಬಿಟ್ಟೆಲ್ಲ ಈ ಬಂಧ
ಆಗಬೇಕು ನಾನು ನನ್ನಲ್ಲೇ ನಾ ತೃಪ್ತ