Wednesday, 1 November 2017

ನವಚೇತನ

ಮಿಡಿಯುವ ಮನ
ತುಡಿಯುವ ತನ
ಮೊಗ ನಿನ್ನ ಕಂಡ ಒಡನೆ
ನವಚೇತನ

ಸುಂದರಿ

ನಿನ್ನ ತವರಿಗೆ ಕಳಿಸಿ ನಾ ಹೇಗಿರಲಿ
ನೀ ಹೋಗಿ ಬಾ ಬೇಗ ಸುಂದರಿ

Tuesday, 24 October 2017

ಓದದ ಪುಸ್ತಕ

ನಾನಾಗಿ ಕೊಂಡಿದ್ದಲ್ಲ ಯಾರೋ ಕೊಟ್ಟಿದ್ದು
ನಾನೊಬ್ಬನೆ ಬರೆದಿದ್ದಲ್ಲ ಎಲ್ಲರೂ ಗೀಚಿದ್ದು
ಎಲ್ಲರ ವಿವರಣೆ ಇತ್ತಲ್ಲಿ, ಎಲ್ಲದರ ವರದಿಯೂ
ಆದರೆ
ಯಾವುದು ಬೇಕಾಗಿತ್ತೊ ಆ ಪುಟವೇ ಹರಿದಿತ್ತು
ಕ್ರಮವಾಗಿ ಅಧ್ಯಾಯಗಳಿದ್ದರೂ
ಪುಟ ಸಂಖ್ಯೆಗಳೆ ತಪ್ಪಾಗಿದ್ದವು
ಎಲ್ಲರೂ ತೆರೆತೆರೆದು ಒದುತ್ತಿದ್ದರು
ನಾನೇ ಓದದ ಪುಸ್ತಕ

Sunday, 8 October 2017

ಕಣ್ಣಾ ಮುಚ್ಚಾಲೆ

  ಸಂಜೆ ನಾ ಇಳಿಯುತ್ತಿದ್ದಾಗ ಪಶ್ಚಿಮ ಘಟ್ಟಗಳ ಮಲೆಯಲ್ಲಿ
ತಟ್ಟನೆ ಸೂರ್ಯ ಸಲ್ಲಿಸಿದ ಅಭಿನಂದನೆಯ ನಗೆಯಲ್ಲಿ
ಕೇಳಿದ ಆಡೋಣವೇ ಆಟ,
ಉದ್ದುದ್ದ ಮರಗಳ ಅಡ್ಡಡ್ಡ ಎಲೆಗಳ ಮರೆಯಲ್ಲಿ

ಅವನಂದ... ನೀನೆಷ್ಟು ಓಡುವೆಯೋ ಜೋರಾಗಿ, ನಾನೂ ಅಷ್ಟೇ ಓಡುವೆ
ಅವನೇ ಸರಿ, ಎಷ್ಟೇ ಓಡಿದರೂ ಇದ್ದ ಅಂತರ ಅಷ್ಟೇ, ನಮ್ಮಿಬ್ಬರ ನಡುವೆ

ಒಮ್ಮೆ ಗುಡ್ಡದಾ ಹಿಂದೆ, ಒಮ್ಮೆ ಮರದ ಬದಿಗೆ, ಮರೆಯಾಗಿ ಪುನಃ ಬರುತಿದ್ದನವನು ಹೀಗೆ
ನಾನೂ ಮರಗಳ ಹಿಂದೆ, ಎಲೆಗಳ ಬದಿಯಲ್ಲಿ ಹೊಂಚು ಹಾಕಿ ಅರಸುತ್ತ ನಡೆದಿದ್ದೆ ಹಾಗೆ

ಅವನೋ ಕಳ್ಳ, ನಸುನಗುತ್ತಾ ಧುತ್ತೆಂದು ಬರುವ, ಮತ್ತೆ ಎಲ್ಲೋ ಓಡುವ
ಮೋಡದ ಮರೆಯಿಂದ ಮಂದಹಾಸ ಬೀರುತ್ತಾ ಬಂದು ನನ್ನ ಹಿಡಿಯೆನ್ನುವ
ಮತ್ತೆ ಮೋಡದ ಮರೆಯಾಗಿ, ಬೆಳ್ಳಿ ಗೆರೆಗಳೆನ್ನೆಳೆಯುತ್ತ ಮುಗುಳು ನಗುವ

ಹಾಗೇ ಮರೆಯಾದವ ಒಮ್ಮೆ ಹೋಗೆ ಬಿಟ್ಟನೋ ಎನುವಂತೆ ಕಣ್ಮರೆಯಾಗುವ 
ಮುಗಿಯಿತೀ ಆಟ ನಾನೆನಲು, ಬೆಟ್ಟದಾ ತುದಿಯಿಂದ ಚಿಣ್ಣನೇ ಚಿಂಗುವ
ಹಿಡಿ ನನ್ನ ಎನ್ನುವ...

ಉತ್ಸಾಹವು ಇಮ್ಮಡಿಯಾಗಿ, ವೇಗವನು ತೀವ್ರಗೊಳಿಸಿ
ನಾ ಮತ್ತೆ ಓಡುವೆ
ಸಲವಂತೂ ನಾ ಅವನನ್ನು ಖಂಡಿತಾ ಹಿಡಿದೇ ತೀರುವೆ

ಎಷ್ಟೇ ಓಡಿದರೂ ನನ್ನ ಕೈ ಸಿಗದಿರೆ ಸಾಕೋ ಮಾರಾಯ ನಾನೆನಲು,
ಮಾಡುತ್ತಾ ಗೇಲಿಯ, ಹಾರುತ್ತ ಬೇಲಿಯ ಕಿಲಕಿಲನೆ ನಗುತ್ತ  
ಮರೆ ತೆರೆಗಳಾ ಮಧ್ಯದಲಿ ನಡೆದಿಹುದು ನಮ್ಮ ಕಣ್ಣಾ ಮುಚ್ಚಾಲೆ

ಮತ್ತೆ ಮೋಡಗಳ ಆಸರೆಯ ಬೇಡಿ, ನಿನ್ನ ಕೈ ಸಿಗು ಒಲ್ಲೆನೆಂದು ಕಾಡಿ
ಹಾಗೆಯೇ ಕತ್ತಲು ಕವಿದಿರಲು, ಮಂಪರು ಮೈಮೇಲೆ ಸುಳಿದಿರಲು
ಮರೆಯಾಗಿ ಹೋದವನ ಕಾಯುತ್ತ ನಾ ನನ್ನ ಕಣ್ಣ ಮುಚ್ಚಲೆ


Sunday, 3 September 2017

ಮಿಂಚು

ಹಕ್ಕಿ ಚುಕ್ಕೆ

ಹಕ್ಕಿ ಚುಕ್ಕೆ
ಸುತ್ತ ಮುತ್ತ ಇರುವ ಕಾಳ ಹೆಕ್ಕಿ
ಚಿಕ್ಕ ಪುಟ್ಟ ನೆನಪೆ ಬಾಳ ಹಕ್ಕಿ
ಕೊರೆಕೊರೆದು ಮರದ ಕಾಂಡ ಕುಕ್ಕಿ
ತಿರುತಿರುಗಿಸಿ ನೆನಪಿನಾಳದ ಚಕ್ಕಿ
ಮನಬಂದಂತೆ ಇಡುತಲಿಹುದು ಹಿಕ್ಕೆ
ಅಂಜಿದ ಮನ ತೊರದಿರಲು ದಿಕ್ಕೆ
ಬ್ರಹದಂಬರದಿ ಬೀಸಿ ಬಂದು ರೆಕ್ಕೆ
ಜೀವಸಾಗರದಿ ಈ ಬಾಳೊಂದು ಚುಕ್ಕೆ

ಕಲೆ ಹಾಕಿದೆನೆ ನಾ

ಕಲೆ ಹಾಕಿದೆನೆ ನಾ
ಯಾರು ಕಲಿಸಿದರೊ ನನಗೆ ಈ ಕಲೆ ಹಾಕುವ ಕಲೆಯ?
ಕಲೆಹಾಕಿದೆ ನಾ stampಗಳ coinಗಳ ಎಲೆಗಳ ಚಿಪ್ಪುಗಳ...
ಕಲೆಹಾಕಿದೆ ನಾ ಹೊಗಳಿಕೆಯ ತೆಗಳಿಕೆಯ ಘಳಿಗೆಗಳ ನೆನಪುಗಳ...
ಸುತ್ತಲೆಲ್ಲ ತುಂಬಿವೆ ಈ
ಸಾಮಾನುಗಳು ನೆನಪುಗಳು
ಆದರೂ ನಾ ಕುಳಿತಿರುವೆ ಒಂಟಿಯಾಗಿ
ಬಹುಶಃ ಮರೆತೆನೆ ನಾ
ಕಲೆಹಾಕಲು ಸಂಬಂಧಗಳ...

ನನ್ನನ್ನೆ ನಾ ಕಂಡು ಕೊಂಡೆ

ನೀ ಕರೆದಾಗ ಓಗೊಟ್ಟು ನಾ ಹತ್ತಿರಕೆ ಬಂದಾಗ
ನನ್ನ ಹೊಸಪರಿಚಯವ ನೀ ನನಗೆ ಮಾಡಿಸಿದೆ
ನೀ ನೋವಲ್ಲಿ ಬೆಂದಿರುವಾಗ, ನಾ ಸಾಂತ್ವನವ ಹೇಳಲು
ನನ್ನ ಹೊಸ ಮಗ್ಗುಲನೆ ನಾ ಕಂಡು ಕೊಂಡೆ ||
ನಿನ್ನ ಆಳವನರಿಯಲು ನಾ ಆಳಕ್ಕೆ ಇಳಿದಾಗ
ನಿನ್ನ ಎತ್ತರವ ತಿಳಿಯಲು ನಾ ಎತ್ತರಕ್ಕೇರಿದಾಗ
ಪರದೆಗಳು ಸರಿದು ಪರಿಧಿಗಳ ದಾಟಿ
ನನ್ನ ಹೊಸ ಪರಿಭಾಷೆಯ ನಾ ಕಂಡು ಕೊಂಡೆ ||
ನಿನ್ನನ್ನೆ ನೋಡುತ್ತಾ, ನಿನ್ನನ್ನೆ ಕೇಳುತ್ತ, ನನ್ನೇ ನಾ ಕಂಡೆ
ಪ್ರೀತಿಯ ಮಾಡುತ್ತಾ, ಮತ್ತೆ ಕಾದಾಡುತ್ತ, ನೀ ಕನ್ನಡಿಯಾಗಿ ನಿಂತೆ
ನಿನ್ನ ತಿಳಿಯಲು ಹೊರಟ ನಾ ನನ್ನನ್ನೆ ತಿಳಿದೆ
ನಿನ್ನ ಹುಡುಕಲು ಹೊರಟ ನನ್ನನ್ನೆ ನಾ ಕಂಡು ಕೊಂಡೆ ||

- Inspired by talks and books on Relationship by J Krishnamurthy

ಮುಂಗಾರು ಮಳೆ

ಕಾಗದದ ದೋಣಿ ನಾ
ಹರಿವ ಈ ತೊರೆಗೆ
ಮಣ್ಣಿನಾ ಕಂಪು ನಾ
ನಿಂತ ಈ ನೀರಿಗೆ
ಹರಿವ ಈ ಹೊಳೆಯು ನಾ
ಭೋರ್ಗರೆವ ಮಳೆಗೆ
ಬಿರಿದ ಈ ಹೂವು ನಾ
ಆಹಾ ಗಾಳಿ ಚಳಿಗೆ
ಗೂಡಲ್ಲಿ ಬಂಧಿ ನಾ
ಬೀಸುವ ಗಾಳಿಗೆ
ಹೆದರು ಹಕ್ಕಿಯಾದೆ ನಾ
ಕೇಳಿದ ಆ ಗುಡುಗಿಗೆ
ನೀರಿನ ಹನಿಯು ನಾ
ಮುಂಗಾರು ಮಳೆಗೆ

ಲಗೋರಿ

ಕಲ್ಲ ಮೇಲೊಂದು ಕಲ್ಲಿನ ಗೋರಿ, ಅದನುರುಳಿಸಿದೆ ಬಾಲೊಂದು ತೂರಿ
ಚಂಗನೆ ಹಾರಿ ಓಡಿದೆ ಪುಟಾಣಿ ಸೈನ್ಯ, ಬೆನ್ನಟ್ಟಿದೆ ಹಿಂದಕೆ ಚಿಣ್ಣರ ಸೈನ್ಯ
ಮತ್ತೆ ಕಟ್ಟಲು ಗೋರಿಯ, ನಾಯಕನೊಬ್ಬ ಬಂದಿಹನು
ಎಸೆದಿಹನು ಬಾಲನ್ನು, ಎದುರು ಪಾಳಿಯ ಧಾಂಡಿಗನು
ಬಾಲಿನ ಪೆಟ್ಟನು ತಪ್ಪಿಸಲು, ನೆಲಕ್ಕೆರಗಿದ ನಾಯಕನು
ದೂರದಿ ಬಾಲು ಓಡಿಹಲು, ಗೋರಿಯ ಮತ್ತೆ ಕಟ್ಟಿದನು
ಎಲ್ಲೆಡೆ ಹೊಯ್ ಹೊಯ್ ಸದ್ದಿಹುದು
ಸೈನ್ಯವು ಹಾರುತ ಓಡಿಹುದು
ಈ ಪಾಳಿಯು ನಿಲ್ಲದು ಬಾಲನ್ನು ತಪ್ಪಿಸಿ ಗೋರಿಯ ಕಟ್ಟುವ ತನಕ
ಆ ಪಾಳಿಯ ಚಿಣ್ಣರಿಗೆ ಬಾಲಿಂದ ಹೊಡೆಸಿ ಸೋಲಿಸುವ ತವಕ
ಕೊನೆಯ ಕಲ್ಲು ಕುಳಿತಿಹುದು, ಗೋರಿಯ ತಲೆಯ ಮೇಲಕೆ ಹಾರಿ
ಗೆದ್ದ ಪಾಳಿಯ ಕಿರುಚಾಟ ತಾರಕಕೆರಿಹುದು, ಲಗೋರಿ ಲಗೋರಿ.

ಜಲಪಾತ

ಜಲಪಾತ
ಮಂಜು ಕೊಡಚಾದ್ರಿಯ ಬೆಟ್ಟಗಳ
ಮಾಡಿಹೆ ಮನೆ...
ನೀರಹನಿಗಳು ಹೊರಟಿವೆ ಧರೆ 
ಸೇರಲು ಚಿಟಪಟನೆ...
ತಂಗಾಳಿಯು ಮೈಯ ಸೋಕಲು
ನಡುಗಿಹೆನು ಮೆಲ್ಲನೆ...
ಹನಿಗಳನು ನೆಂಟರೆಂದು ಜೀರುಂಡೆಗಳು
ಕರೆದಿಹುದು ಜೀರ್ರನೆ...
ಇವೆಲ್ಲದರ ಪರಿವೆಯೇ ಇಲ್ಲದೆ
ಧುಮುಕಿಹುದು ಭೂಮಿಗೆ
ಹಿದ್ಲುಮನೆ.

ಈ ಮಧ್ಯಾನ್ನ...

ಈ ಮಧ್ಯಾನ್ನ...
ಹೊರಗೆ ಭೋರ್ಘರೆವ ಮಳೆ, ಒಳಗೆ ಮಂಪರಿನ ಎಳೆ
ಬಾನಲಿ ಕಾರ್ಮೋಡಗಳ ಸುಳಿ, ಮೈಯ್ಯೆಲ್ಲ ಭಾರವಾದ ಚಳಿ
ಅಂಗಳದಿ ತೊಯ್ದ ಮಣ್ಣ ವಾಸನೆ, ಕಣ್ಣಲಿ ಅಮಲು ಮಾಡಿದೆ ಮನೆ
ಯಾಕಿಂದು ಪ್ರಕ್ರತಿಯು ಸುರಿಸಿಹಳು ಪ್ರೀತಿ?
ಪ್ರಿಯತಮೆಯು ಪಾಯಸವ ಕುಡಿಸಿದಾ ರೀತಿ!!!

ಯವನಿಕೆಯು ಸರಿದಾಗ

ಯವನಿಕೆಯು ಸರಿದಾಗ...
ಮೂಡಿತ್ತು ಬೆಳಕು ವೇದಿಕೆಯಲಿ
ಏರಿತ್ತು ರಂಗು ಮುಖದಲಿ
ಮಿಂಚಿತ್ತು ಹೊಳಪು ಕಣ್ಣಿನಲಿ 
ಮೀರಿತ್ತು ಉತ್ಸಾಹ ಎದೆಯಲಿ
ಚೀರಿತ್ತು ತವಕದಿ ಕಂಠವು
ಸೂಸಿತ್ತು ಎಲ್ಲೆಡೆ ಸಂಗೀತವು
ಜಾರಿತ್ತು ಪರಿವೆಯಿಲ್ಲದೆ ಸಮಯವು
ಸಾಗಿತ್ತು ಜೀವನದ ನಾಟಕವು
ಯವನಿಕೆಯು ಇಳಿದಾಗ...
ಏಲ್ಲವೂ ಸ್ತಬ್ಧ!!!

ವಿಸರ್ಜನೆ

ಹೊರಟಿಹುದು ಮೆರವಣಿಗೆ ಗಣೇಶನ ಹೊತ್ತು
ಡೋಲು, ಚಂಡೆ, ಜೋರಾದ ಜಾಗಟೆ ಅವನೊಡನೆ ಇತ್ತು
ಗಣನಾಯಕನ ಗುಣಗಾನ, ಹಾಡುಗಳ ಸದ್ದು
ಮದವೇರಿದ ನರ್ತನ, ಹಿಂಡಿನ ಚೀರಾಟವಿದ್ದು
ನೀಡಿಹರು ವಂದನೆಯ ಸಾಲಾಗಿ ನಿಂತವರು
ಈ ಸಲದ ಪಯಣಕೆ ಇನ್ನೂ ಜನ ಬರುತಿಹರು

ಇವೆಲ್ಲಕ್ಕೂ ತನಗೂ ಇಲ್ಲದಂತೆ ಸಂಭಂದ
ಕುಳಿತಿಹನು ಅವನು ಹಾಗೆ ನಿರ್ಲಿಪ್ತ
ಕೊನೆಯ ಪಯಣವೇ ಹಾಗೆ, ಬಿಟ್ಟೆಲ್ಲ ಈ ಬಂಧ
ಆಗಬೇಕು ನಾನು ನನ್ನಲ್ಲೇ ನಾ ತೃಪ್ತ