Sunday, 12 May 2019

ಮೈಲಿಗಲ್ಲು

ಸುತ್ತೆಲ್ಲ ಬೆಳೆದಿದ್ದರೂ 
ಕುರುಚಲು ಹುಲ್ಲು
ಡಾಂಬರು ರಸ್ತೆಯಾದರೂ
ಅಲ್ಲಲ್ಲಿ ಬಿದ್ದಿಹ ಮುಳ್ಳು ಕಲ್ಲು
ಬಿಸಿಲು ಮಳೆಯೆನ್ನದೆ ಕಳೆದ
ಚಳಿಗಾಲದಲ್ಲೂ
ಎಷ್ಟೋ ಜನರ ದಾಟಿಸಿದರೂ
ಇರದ ಹೆಮ್ಮೆಯಲ್ಲೂ
ನಿಂತಿಹುದು ಅಲ್ಲೇ
ಈ ಮೈಲಿಗಲ್ಲು||
ಕ್ರಮಿಸಿದ ದಾರಿಯ ದೂರವ
ಚಾಲಕನಿಗಿತ್ತ ಆ ಲೆಕ್ಕದಲ್ಲೂ
ರಸ್ತೆಯ ಬಿಟ್ಟು ಜಾರಿದ ಚಕ್ರವ
ನಿಲ್ಲಿಸಿದ ಆ ಕ್ಷಣದಲ್ಲು
ದಣಿದ ಕಾಲುಗಳಿಗೆ ಆಯಾಸ
ನೀಗಿಸಿದ ನಿಟ್ಟುಸಿರಲ್ಲೂ
ರಸ್ತೆಯ ದಾಟಿದ ಪ್ರತಿಜೀವದ
ಭಾವವ ನೋಡಿದ ಪರಿಯಲ್ಲೂ
ನಿಂತಿಹುದು ಅಲ್ಲೇ
ಈ ಮೈಲಿಗಲ್ಲು||

No comments:

Post a Comment