Sunday, 25 October 2020

ಯುಧ್ಧ – ವೈರಸ್

 ಇಂದು ಈ ಡೆಲಿವೆರೆಬಲ್ ಹೋಗದಿದ್ದಲ್ಲಿ ನನ್ನ ಬಾಸ್ ನನ್ನ ರಾಜೀನಾಮೆ ಕೊಡಿಸುವುದಂತು ಗ್ಯಾರಂಟಿ. ಅದಕ್ಕೆ ಅಲ್ಲವೆ ಹಲವು ದಿನಗಳಿಂದ ನಾನು ಮನೆಯಿಂದಲೇ ಹಗಲಿರುಳೆನ್ನದೆ ಒಂದೇ ಸಮನೆ ಕೆಲಸ ಮಾಡುತ್ತಿದ್ದುದು. ಇಷ್ಟು ದಿನಗಳಲ್ಲಿ ನಾನು ಸರಿಯಾಗಿ ನೋಡಿದ್ದೆಂದರೆ ಎರೆಡೇ ವಸ್ತುಗಳ ಮುಖಗಳನ್ನ - ನನ್ನ ಲ್ಯಾಪ್ಟಾಪ್ ಮತ್ತು ನನ್ನ ಫ್ರಿಡ್ಜ್. ನಾನು ನನ್ನ ಮುಖ ಪುಸ್ತಕ ಅಂದರೆ ಫೇಸ್ಬುಕ್, ಇನ್ಸ್ಟಾಗ್ರಾಮ್ಗಳನ್ನೂ ನೋಡಿಲ್ಲ ಅಂದರೆ ನೀವು ನಂಬಲ್ಲ ಅಲ್ಲವೆ! ಆದರೆ ಇದು ದಿನಂಪ್ರತಿ ಪೂರ್ವದಿಂದ ಸೂರ್ಯ ಹುಟ್ಟಿದಷ್ಟೂ, ವಾಟ್ಸಾಪ್ಪ್ನಲ್ಲಿ ಐದಕ್ಕಿಂತ ಹೆಚ್ಚು ಫಾರ್ವರ್ಡ್ ಮಾಡಲಿಕ್ಕಾಗದಷ್ಟೇ ಸತ್ಯ. ಅದೆಲ್ಲ ಬಿಡಿ, ಥತ್ ಇವತ್ತೇ ಇಂಟರ್ನೆಟ್ ಕೈ ಕೊಡಬೇಕೇ? ಇನ್ನು ನನಗೆ ಬೆಂಗಳೂರು ಟ್ರಾಫಿಕ್ಕೇ ಗತಿ. ಇಷ್ಟು ದಿನ ನಾನು ಯಾವುದನ್ನು ತಳ್ಳುತ್ತ ಬಂದಿದ್ದೇನೋ ಇಂದು ಅದೇ ನನ್ನನ್ನು ತಳ್ಳಿಕೊಂಡು ಆಫೀಸ್ ತಲುಪಿಸುವುದು ಗ್ಯಾರಂಟಿ. ಆಫೀಸ್ ಗೆ ಹೋಗ ಬೇಕೆಂದರೆ ತಯಾರಾಗಬೇಕು. ಈ ತಯಾರಿಯೆಂದರೆ ಸುಮಾರೆ? ಎಷ್ಟೋ ದಿನಗಳಿಂದ ಬೆಳಕೇ ಕಾಣದ ಬಟ್ಟೆ ಹೊರತೆಗೆಯಬೇಕು, ನಯವಾಗಿ ಇಸ್ತ್ರಿ ಮಾಡಬೇಕು. ಎಷ್ಟೋ ದಿನದಿಂದ ಸರಿಯಾಗಿ ನೀರೇ ಕಾಣದ ಗಡ್ಡವನ್ನು ಬೋಳಿಸಬೇಕು, ಒಹೋ ಎಷ್ಟೆಲ್ಲಾ ಕೆಲಸ. ಇಷ್ಟು ದಿನ ನಾನಾಯಿತು ನನ್ನ ಬರ್ಮುಡಾ ಟೀ ಶರ್ಟ್ ಆಯಿತು, ಹಾಗೂ ಹೀಗೂ ರೆಡಿ ಆದದ್ದೂ ಆಯಿತು.


ಬಾಗಿಲಿಗೆ ಬೀಗ ಜಡಿದು ಹೊರಬಂದರೆ ಯಾಕೋ ಏನೋ ಸರಿಯಾಗಿಲ್ಲ ಅನಿಸಿತು. ರಸ್ತೆಯಲ್ಲಿ ಎಲ್ಲರೂ ಮುಖಕ್ಕೆ ಮುಖವಾಡ ಧರಿಸಿದ್ದಾರೆ! ಹವೆಯಲ್ಲೇ ಏನೋ ಗಬ್ಬು ವಾಸನೆಯಿರುವಂತೆ ಮುಖ ಕಿವುಚಿಕೊಂಡಿದ್ದಾರೆ! ನನ್ನ ಎದುರಿಗೆ ಬಂದ ಇಬ್ಬರಂತೂ ತಮ್ಮ ಎರಡೂ ಕೈಗಳನ್ನು ಉಜ್ಜಿ ಯಾವುದೋ ವಿಚಿತ್ರ ಪ್ರಾಣಿಯನ್ನು ನೋಡುತ್ತಿರುವಂತೆ ನೋಡಿ, ತುಸು ದೂರ ಸರಿದುಕೊಂಡು ಹೋಗುತ್ತಿದ್ದಾರೆ. ಅರೆರೆ! ಏನಾಯಿತು ಈ ಒಂದು ವಾರದಲ್ಲಿ, ನನಗೆ ತಿಳಿಯದ್ದು?! ನಾನಂತೂ ಮನೆಯೊಳಗಿದ್ದದ್ದು ಸರಿ, ಫೇಸ್ಬುಕ್ಕೂ ನೋಡದಿದ್ದದ್ದು ಸರಿ, ಇಷ್ಟರಲ್ಲೇ ಮಾಹಾಯುದ್ಧವೇನಾದರೂ ಆಯಿತೇ?!! ಒಂದು ವಾರದ ಹಿಂದಷ್ಟೇ ಟ್ರಂಪ್ ಚೀನಾದೊಂದಿಂಗೆ ಸರಿಯಾಗಿಯೇ ನಡೆದುಕೊಂಡಿದ್ದನಲ್ಲ! ಅಲ್ಲ ನಿನ್ನೆ ರಾತ್ರಿ ಬಿರಿಯಾನಿ ಡೆಲಿವರಿ ಮಾಡಲು ಬಂದ ಸ್ವೀಗ್ಗಿಯವನಾದರೂ ನನಗೆ ಈ ಬಗ್ಗೆ ಹೇಳಬಹುದಿತ್ತಲ್ಲ. ಕ್ಷಮಿಸಿ, ಇದನ್ನು ನಿಮಗೆ ಹೇಳಲು ಮರೆತೆ, ಲ್ಯಾಪ್ಟಾಪ್ ಮತ್ತು ಫ್ರಿಡ್ಜ್ ಬಿಟ್ಟು ನಾನು ದಿನಾ ನೋಡುತ್ತಿದ್ದ ಇನ್ನೊಂದು ಮುಖವೆಂದರೆ ಈ ಸ್ವೀಗ್ಗಿಯವನು. ಗಡಿ ಕಾಯುವ ಯೋಧನಂತೆ ತದೇಕ ಚಿತ್ತನಾಗಿ ಪ್ರಪಂಚ ವಿಮುಖನಾಗಿ ಒಂದೇ ಸಮ ಕೆಲಸ ಮಾಡುತ್ತಿದ್ದಾಗ ನನ್ನ ಮುಖ ನೋಡಿ ನಗುತ್ತಿದ್ದ ಒಂದೇ ನರಪ್ರಾಣಿ ಈ ಸ್ವೀಗ್ಗಿಯವನು. ಅವನಾದರೂ ಈ ಆಪತ್ತಿನ ಬಗ್ಗೆ ನನಗೆ ಎಚ್ಚರಿಸಬಹುದಿತ್ತಲ್ಲವೇ? ಛೆ, ಇಂದಿನಿಂದ ನಾನು ಸ್ವೀಗ್ಗಿ ಆಪ್ಅನ್ನು ಉಪಯೋಗಿಸಿ ಕೊಳ್ಳುವುದೇ ಇಲ್ಲ. ಅದಕ್ಕಿಂತಲೂ ಮೊದಲು ಇದರ ಬಗ್ಗೆ ಟ್ವೀಟ್ ಅನ್ನಾದರೂ ಮಾಡಬೇಕು. ಆದರೆ ಇದೆಲ್ಲಕ್ಕಿಂತ ಮೊದಲು ಈಗ ಏನಾಗುತ್ತಿದೆಯೆಂದು ತಿಳಿದು ಕೊಳ್ಳುವುದು ಬೇಕಿತ್ತು. ಆದರೆ ನಾನು ಯಾರನ್ನು ಕೇಳಲಿ? ನನ್ನ ಫ್ಲಾಟ್ನ ಪಕ್ಕದ ಮನೆಯವರನ್ನೇ ನಾನು ಇವತ್ತಿನವರೆಗೂ ನೋಡಿಲ್ಲ, ಮಾತನಾಡುವುದು ಆಮೇಲಿನ ಮಾತು. ಇನ್ನು ಸೆಕ್ಯುರಿಟಿಯವನಾಗಲಿ, ನಮ್ಮ ರಸ್ತೆ ಬದಿಯ ಸಿಗರೇಟ ಅಂಗಡಿಯವನಾಗಲಿ ನನಗ್ಯಾರ ಪರಿಚಯವೂ ಇಲ್ಲ.

ಹೀಗಯೇ ಯೋಚಿಸುತ್ತ ದರ್ಶಿನಿಯ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆ, ನನ್ನ ರಸ್ತೆಯ ದೋಸ್ತಿ ತನ್ನ ಮುಖಕ್ಕೆ ಹಾಕಿಕೊಂಡ ಮುಖವಾಡ ತೆಗೆಯುತ್ತಾ ದೊಡ್ಡ ಮುಗುಳ್ನಗೆಯೊಂದಿಗೆ ಎದುರುಗೊಂಡ. ಅಬ್ಬಾ, ಇವನಾದರೂ ಸಿಕ್ಕನಲ್ಲ ನನ್ನ ಉದ್ವಿಗ್ನತೆ ಹೇಳಿಕೊಳ್ಳಲು ಎಂದುಕೊಳ್ಳುತ್ತ ನನ್ನ ಬಲಕೈಯನ್ನು ಮುಂದಿಕ್ಕಿ ಅವನ ಕೈಕುಲುಕಲು ಎದುರಾದೆ. ಅವನೋ ಹಾವು ಕಚ್ಚಿದವನಂತೆ ಒಮ್ಮೆಲೇ ಹಿಂದಕ್ಕೆ ಹಾರಿ, "ಮಿತ್ರ, ಸ್ವಲ್ಪ ತಡೆ " ಎಂದು ತನ್ನ ಜೇಬಿನಿಂದ ಚಿಕ್ಕ ಪೊಟ್ಟಣವನ್ನು ತೆರೆದು ನನ್ನ ಕೈಮೇಲೆ ಹಿಡಿದ. ಅದರಿಂದ ಬಿಳಿಯದ್ರವ ಹರಿದುಬಂದು ನನ್ನ ಮುಂಗೈ ಸೇರಿತು."ಮಿತ್ರ, ಚೆನ್ನಾಗಿ ಎರೆಡು ಕೈಗಳನ್ನು ಈ ದ್ರವದಿಂದ ಉಜ್ಜಿಕೊ" ಎಂದ. ನಾನು ಹಾಗೆಯೆ ಮಾಡುತ್ತಾ ,"ಏನಿದು ದ್ರವ? ಏನಾಗುತ್ತಿದೆ ಇಲ್ಲಿ?" ಎಂದು ಕೇಳಿದೆ. ಅವನು, "ಗೆಳೆಯ, ನಿನಗಿದೆಲ್ಲ ತಿಳಿದಿಲ್ಲವೇ!! ಎಲ್ಲಿ ಹೋಗಿದ್ದೆ ನೀನು? ಯಾಕೆ ಮುಖವಾಡ ಹಾಕಿಕೊಂಡಿಲ್ಲ?" ಎಂದ. ನಾನು,"ಅಂದರೆ ಅರ್ಥವಾಗಲಿಲ್ಲ!! ಯಾಕೆ ಜನರೆಲ್ಲಾ ಹೀಗಿದ್ದಾರೆ? ಯುಧ್ಧ ವೇನಾದರೂ ಆಗುತ್ತಿದೆಯೇ?" ಎಂದು ಕೇಳಿದೆ. "ಆಹಾ. ಹೌದು ಇದು ಯುಧ್ಧವೇ. ಶತ್ರುದೇಶವವರು ನಮ್ಮ ಮೇಲೆ ಬಾಂಬ್ ಹಾಕಿಲ್ಲ ಅಷ್ಟೇ . ಆದರೆ ಪರದೇಶದ ಒಂದು ವೈರಸ್ ನಮ್ಮ ದೇಶದೊಳಗೆ ಬಂದಿದೆ. ಅದು ಎಲ್ಲೂ ಇರಬಹುದು. ನಿನ್ನ ಕೈಯಲ್ಲೇ ಇರಬಹುದು ಅಥವಾ ನನ್ನ ಕೈಯಲ್ಲೂ ಇರಬಹುದು. ಯಾರು ಯಾರ ಕೈ ಕುಲುಕಿದರೂ ನಮ್ಮಿಬರಿಗೂ ಆಪತ್ತು.", ಅವನಂದ. ಈಗ ನಾನು, "ಆಪತ್ತು ಎಂದರೆ?". ಅವನು, "ಆಪತ್ತೆಂದರೆ ಸಾವೇ ಬರಬಹುದು." ಮುಖ ಸಿಂಡರಿಸುವ ಸರದಿ ನನ್ನದಾಗಿತ್ತು. "ಅದಿರಲಿ. ನೀನ್ಯಾಕೆ ಹೊರಬಂದೆ? ಇವತ್ತಿಂದ ಅನಾವಶ್ಯಕವಾಗಿ ಯಾರು ಹೊರಬರಬಾರದೆಂದು ಸರಕಾರ ಆದೇಶ ಹೊರಡಿಸಿದೆ." ಈಗ ಪ್ರಶ್ನಿಸುವ ಸರದಿ ಅವನದಾಗಿತ್ತು. ನಾನು ," ಅಯ್ಯೋ ವಿಪರ್ಯಾಸವೇ!! ನಾನು ಇಷ್ಟುದಿನ ಮನೆಯೊಳಗೇ ಇದ್ದೆ. ನಾನು ಹೊರಬಂದಿದ್ದೆ ಇಂದು. ನನಗೆ ಹೊರಪ್ರಾಂಚಲ್ಲಿ ಏನಾಗುತ್ತಿದೆ ಎಂದು ಗೊತ್ತೇಇರಲಿಲ್ಲ. ನನಗೆ ಆವಶ್ಯಕ ಕೆಲಸವಿರುವುದರಿಂದ ಹೊರಗೆಬಂದಿದ್ದೇನೆ." ಅವನು, "ಮಿತ್ರ ಇವತ್ತು ಆಫೀಸ್ ಖಂಡಿತವಾಗಿಯೂ ತೆರೆದಿರುವುದಿಲ್ಲ. ಹಾಗೆಯೇ ಜಾಗ್ರತೆ. ಯಾರನ್ನಾದರೂ ಮಾತನಾಡಿಸಲು ಮುಟ್ಟಲು ಹೋಗಬೇಡ. ಯಾವುದಾದರೂ ಮದ್ದಿನ ಅಂಗಡಿಯಲ್ಲಿ ಈ ದ್ರವ ಸಿಗುವುದೇ ಕೇಳಿ ನೋಡು. ಇಲ್ಲದಿದ್ದರೆ ಬದುಕುವುದು ಕಷ್ಟ. ನಿನ್ನ ಬಾಸ್ಗೆ ಫೋನ್ ಮಾಡಿ ನೋಡು. ಅವನು ಮನೆಯಲ್ಲಿರುತ್ತಾನೆ. ಮಿತ್ರ, ನಾನು ತುರ್ತಾಗಿ ಹೋಗಬೇಕಾಗಿದೆ. ಅಗೋ ನೋಡು, ಅಲ್ಲಿ ಹಾಲಿನ ಬೂತ್ ತೆರೆದಿದೆ. ಅದು ಮುಚ್ಚುವುದರೊಳಗೆ ನಾನು ಹಾಲು ಕೊಂಡು ಮನೆಗೆ ಹೋಗಬೇಕು." ಎಂದು ನನ್ನ ಉತ್ತರಕ್ಕೂ ಕಾಯದೆ ಮತ್ತೆ ಕೈ ಕುಲುಕದೆ ಹಾಗೆಯೇ ಹೊರಟು ಹೋದ . ನಾನು ನಡುಗುವ ಕೈಗಳಿಂದ ಮೊಬೈಲನ್ನು ಜೇಬಿನಿಂದ ಹೊರತೆಗೆದೆ.

No comments:

Post a Comment