Sunday, 16 February 2025

ಸ್ವಪ್ನ ಸಾರಸ್ವತ

 ಓದಿ ಮುಗಿಸಿದ ಹಲವು ದಿನಗಳ ನಂತರವೂ ಕಾಡುವ ಕಾದಂಬರಿ - ಸ್ವಪ್ನ ಸಾರಸ್ವತ. ಸಾರಸ್ವತನಾದ ನನ್ನ ಪೂರ್ವಜರ ಕಥೆ ಇದು ಎನ್ನುವುದು ಒಂದು ಕಾರಣವಾದರೆ, ಶ್ರೀ ಗೋಪಾಲಕೃಷ್ಣ ಪೈಯವರು ಇದರಲ್ಲಿ ಹುದುಗಿಸಿರುವ ಅನೇಕ ವಿಷಯಗಳು ಮತ್ತು ಆ ವಿಷಯಗಳ ಸೂಕ್ಷ್ಮತೆಗಳೂ ಇರಬಹುದು. ಓದಿ ಮುಗಿಸಿದ ಕೊನೆಯಲ್ಲಿ ಒಂದು ನಿರಾಳತೆಯ ನಿಟ್ಟುಸಿರು ಹೊರಬರುವುದು ನಿಜ. ಹಾಗೆಯೇ ನನ್ನನ್ನು ಹಿಡಿದಿಟ್ಟುಕೊಂಡು ಓದಿಸಿದ ಕಾದಂಬರಿ. ಹಾಗಂತ ಇದನ್ನು ನಾನು ನಾಗಾಲೋಟದಿಂದ ಓದಿದ್ದೂ ಇಲ್ಲ. ಬಿಸಿಯಾದ ಕಾಫಿಯನ್ನು ಮೆಲ್ಲಗೆ ಹೀರಿ ಸವಿಯುವ ರೀತಿಯಲ್ಲಿ ಓದಿಸಿಕೊಂಡು ಹೋಗಿತ್ತು.

ಪ್ರತಿಯೊಬ್ಬ ಗೌಡ ಸಾರಸ್ವತನು ತಪ್ಪದೆ ಓದಬೇಕಾದ ಕಾದಂಬರಿ ಇದು. ತಮ್ಮ ತನವನ್ನು ಕಂಡು ಕೊಳ್ಳುವುದರಲ್ಲಿ ಈ ಕಾದಂಬರಿ ಒಂದು ಹಾದಿ ತೋರುವುದರಲ್ಲಿ ಸಂಶಯವಿಲ್ಲ. ಸುಮಾರು ಐನೂರು ವರ್ಷಗಳ ಹಿಂದಿನ ಗೋವೆಗೆ ನಮ್ಮನ್ನು ಕೊಂಡೊಯ್ದು ಆ ಕಾಲದ ಜನರನ್ನು, ಅವರ ರೀತಿ ನೀತಿಗಳನ್ನು, ಆಗಿನ ರಾಜಕೀಯ ಮತ್ತು ಸಾಮಾಜಿಕ ಚಿತ್ರಣಗಳನ್ನು ಕೊಡುತ್ತ ಸಾರಸ್ವತರು ಅಲ್ಲಿಂದ ಹೇಗೆ ಕೊಂಕಣ ತೀರದಲ್ಲಿ ಬಿತ್ತರಿಸಿ ಹೋದರು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಪೈಗಳು ಈ ಕಾದಂಬರಿಯಲ್ಲಿ ಚಿತ್ರಿಸುತ್ತಾರೆ. ಅಂತೆಯೇ ಈ ಸಾರಸ್ವತರು ಹೇಗೆ ಜೀವನವನ್ನು ತಮ್ಮ ಹುಟ್ಟೂರಾದ ಗೋವೆಯಿಂದ ದೂರವಾಗಿ ಪುನಃ ಕಟ್ಟಿದರು ಎಂದು ಏಳೆಂಟು ತಲೆಮಾರುಗಳ ಮೂಲಕ ಸ್ವಪ್ನ ಸಾರಸ್ವತ ನಮಗೆ ತೋರಿಸುತ್ತದೆ.
ಕಾದಂಬರಿಯಲ್ಲಿ ಬರುವ ನಾಗ್ದೋ ಬೇತಾಳ, ಮಾಲ್ಶಿ ಮಾಂಯಿ ದೇವಸ್ಥಾನ, ವೆರ್ನೆಗ್ರಾಮ ಹಾಗೆಯೇ ಪೋರ್ಚುಗೀಸರ ಕಾಟ ತಾಳಲಾರದೆ ವೆರ್ನೆ ಇಂದ ಗೂಳೇ ಹೊರಟ ಕುಟುಂಬಗಳು, ಇವರ ಪಯಣದುದ್ದಕ್ಕೂ ಸಿಗುವ ದಕ್ಷಿಣ ಕರಾವಳಿಯ ಊರುಗಳು, ಕೊನೆಯಲ್ಲಿ ಬರುವ ಕುಂಬ್ಳೆ ಮತ್ತು ಬಳ್ಳಂಬೆಟ್ಟು ಗ್ರಾಮಗಳನ್ನು ನಾವು ನೋಡದೆ ಇದ್ದರೂ ನಮ್ಮವಾಗಿಸಿ ಬಿಡುತ್ತವೆ.
ಈ ಕಾದಂಬರಿಯ ದೊಡ್ಡ ಹೆಗ್ಗಳಿಕೆಯೆಂದರೆ ಭಾರತದ ಇತಿಹಾಸದ ಅತ್ಯಂತ ನಾಟಕೀಯ ಕ್ಷಣಗಳಾದ ಯುರೋಪಿಯನ್ನರ ದಬ್ಬಾಳಿಕೆ, ಒಂದು ಪ್ರದೇಶದಿಂದ ವಲಸೆ ಬಂದು ಹೊಸತಾಗಿ ಇನ್ನೊಂದು ಪ್ರದೇಶದಲ್ಲಿ ಏಳಿಗೆ ಕಾಣುವಂತಹ ಸನ್ನಿವೇಶಗಳನ್ನು ಎಲ್ಲೂ ಅತಿರೇಕದ ಆಮಿಷಕ್ಕೆ ಒಳಗಾಗದೆ ಬಹಳ ಸಹಜವಾಗಿ ಬಿಂಬಿಸಿರುವುದು. ಆದರೆ ಇದೇ ಚಿತ್ರಣ ಕಾದಂಬರಿಯ ದ್ವಿತೀಯಾರ್ಧದಲ್ಲಿ ಸ್ವಲ್ಪ ಮಟ್ಟಿಗೆ ಪುನರಾವರ್ತಿತವಾಗಿ ಬೇಜಾರು ತರಿಸುವಂತಿತ್ತು. ಹಾಗೆಯೇ ಕಾದಂಬರಿಯ ಕಾಲಮಾನ 400 - 500 ವರ್ಷಗಳಷ್ಟು ಹಳೆಯದಾದರೂ ನನಗೇಕೋ ಕಥೆಯಲ್ಲಿ ಕೊಟ್ಟಿರುವ ವಿವರಗಳಿಂದ ಈ ಕಾಲಮಾನ ಸುಮಾರು 100 - 150 ವರ್ಷಗಳಷ್ಟು ಮಾತ್ರ ಹಳೆಯದೆಂದು ತೋರುತ್ತಿತ್ತು.
ಅನಿಸಿಕೆಗಳೇನೇ ಇರಲಿ ಸ್ವಪ್ನ ಸಾರಸ್ವತ ಕಾದಂಬರಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಕೊಡುಗೆಯೇ ಸರಿ. ಅದನ್ನು ನೀಡಿದ ಶ್ರೀ ಗೋಪಾಲಕೃಷ್ಣ ಪೈ ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.

No comments:

Post a Comment