Tuesday, 21 November 2023

ಹಬ್ಬ

ಹಿಂದಿನ ತಿಂಗಳ ಪೂರ್ತಿ ಬೆವರಿಳಿಸಿ ದುಡಿದ ಕೆಲಸಕ್ಕೆ 

ಈ ತಿಂಗಳ ಐದನೇ ತಾರೀಕಿಗೆ ಸಂಬಳ ಸಿಕ್ಕಿದ ದಿನ.


ವಾರದ ರಜೆಯಂದು ಮುಂಜಾನೆಯೇ ತೆರೆದಿಟ್ಟ ಅಂಗಡಿಯಲಿ

ಸಾಯಂಕಾಲವಾದಾಗ ಜನ ತುಂಬಿ ಹೋದ ದಿನ.


ಸರಾಗ ಎಂಟು ರಾತ್ರಿಗಳ ಪಾಳಿ ಮಾಡಿದ ಮೇಲೆ, ಮರುದಿನ 

ಮುಂಜಾನೆ Supervisor ಫೋನಾಯಿಸಿ ಇವತ್ತು ರಜೆ ಎಂದ ದಿನ.


ಗಾಡಿ ತುಂಬಾ ಹೂ ತರಕಾರಿಗಳ ತುಂಬಿ ಬೀದಿ ಬೀದಿ ಅಲೆದು

ಕೊನೆಯಲ್ಲಿ ಖಾಲಿಯಾದ ಗಾಡಿಯೊಂದಿಗೆ ಹಿಂತಿರುಗಿದ ದಿನ.


ದಿನ ಪೂರ್ತಿ ಕಾದು, pick -up message ಬರದೇ ಬೇಸತ್ತು 

ರಾತ್ರಿಯಾದಾಗ ಆಟೋದಲ್ಲಿ ಬಿಡದೆ ಜನ ಹತ್ತಿಳಿದ ದಿನ.


ಮಲ್ಲಿಗೆಯಂತ ಇಡ್ಲಿಗಳು ಬಿಸಿಯಾರುವ ಮೊದಲೆ

ತಟ್ಟೆಯಿಂದ ಗ್ರಾಹಕರ ಹೊಟ್ಟೆಗಿಳಿದ ದಿನ.


ನಿನ್ನೆ ಮೊನ್ನೆಯೆಲ್ಲ ಜಾಗ ಬದಲಾಯಿಸಿ ಕಾದು ಕೊಂಡಿದ್ದರೂ 

ಬರದಿದ್ದ, ಒಟ್ಟೊಟ್ಟಿಗೆ delivery orderಗಳು ಬಂದ ದಿನ.


ದಿನವಿಡೀ ಉರಿಬಿಸಿಲಿನಲ್ಲಿ Traffic ನಿಭಾಯಿಸುತ್ತಾ 

ಮಧ್ಯಾಹ್ನದ ವೇಳೆಗೆ ಆಗಸದಲ್ಲಿ ಮೋಡಗಳ ಕಂಡ ದಿನ.


ಎಂದಿನಂತೆ ಇಂದೂ ಕಸ ಎತ್ತಲು ತಯಾರಾಗುತಿದ್ದಾಗ 

Union leader ಕರೆ ಮಾಡಿ ಮುಷ್ಕರಕ್ಕೆ  ಕೈ ಜೋಡಿಸು ಎಂದ ದಿನ.


ದೀಪಾವಳಿಯ ಮರುದಿನ ಮುಂಜಾವು 

ward ಹೊರಗಿನ ಬೆಂಚಿನ ಮೇಲೆ ಅರೆ ನಿದ್ರೆಯಲ್ಲಿದ್ದವಳನ್ನು

ಎಬ್ಬಿಸಿ Senior Doctor "ಇವತ್ತು ಮನೆಗೆ ಹೋಗ ಬಹುದು" ಎಂದ ದಿನ.

No comments:

Post a Comment