ನನ್ನ ಮುಂಜಾನೆಯ ವೇಗದ ನಡಿಗೆ ಇಂದು ಸ್ವಲ್ಪ ಹಿನ್ನಡೆದಿತ್ತು. ನಿನ್ನೆ ಸಂಜೆಯ ಮಳೆಯಿಂದಲೋ ಏನೋ ರಾತ್ರಿಯಿಡಿ ಚಳಿಯಿತ್ತು. ಬೆಳಗ್ಗೆ ಮುಸುಕು ಹಾಕಿಕೊಂಡ ಸೂರ್ಯ ಮಲಗೇ ಇದ್ದ, ಹೊರಗೆ ಬರಲೇ ಇಲ್ಲ. ಹಾಗಾಗಿ ನನಗೆ ಅಲಾರಾಂ ಆಗಿದ್ದು, ನಾನದನ್ನು ಸುಮ್ಮನಾಗಿಸಿದ್ದು ನನಗೆ ತಿಳಿಯಲೇ ಇಲ್ಲ. ಎದ್ದಾಗ ಏಳು ಮೂವತ್ತು. ಹಾಸಿಗೆಯಲ್ಲೇ ಕುಳಿತು, ಇಂದು ವಾಲ್ಕಿಂಗ್ ಬೇಡ ಎಂದು ಹೃದಯ ಹೇಳಿದಾಗ, ಮೆದುಳಿನ ಅಲಾರಾಂ ಹೊಡೆದು, ಇಲ್ಲ ನೀನು ಹೋಗಲೇ ಬೇಕು, ಹದಿನೈದು ನಿಮಿಷವಾದರೂ ಹೋಗಬೇಕು. ನೋಡು ನಿನ್ನ ಹೊಟ್ಟೆಯನ್ನು, ಹೇಗೆ ನಿನ್ನ ಆಲಸ್ಯವನ್ನು ಜಗಕ್ಕೆಲ್ಲ ತಿಳಿಸುತ್ತಿದೆ! ನಿನ್ನೆ ನೀನು ನಾಲ್ಕನೆಯ ಮಹಡಿ ಮೆಟ್ಟಿಲಿಂದ ಏರುತ್ತಿದಾಗ, ನಿನ್ನ ಕಾಲುಗಳು ಕೈಕೊಟ್ಟಿರಲಿಲ್ಲವೇ? ಏಳು ಎದ್ದೇಳು ಹೊಟ್ಟೆ ಇಳಿಯುವವರೆಗೂ ನಡೆಯುತ್ತಿರು... ಎಂದು ವಿವೇಕಾನಂದರೇ ಬಂದು ಎಚ್ಚರಿಸಿದಂತಾಯಿತು. ಇನ್ನು ಸರ್ವಜ್ಞನೇ ಬಂದು ಎಚ್ಚರಿಸುವ ಮುನ್ನ ನಾನು ಏಳುವುದೇ ಲೇಸೆಂದು ದಡಬಡನೆ ನನ್ನ ಪ್ರಾತರ್ವಿಧಿಯನ್ನು ಮುಗಿಸಿ, ಮರುನಿಮಿಷದಲ್ಲೇ ಶೂಸಿನ ಲೇಸನ್ನು ಕಟ್ಟಿ ಸಿದ್ಧನಾದೆ.
ಎಂದಿಗಿಂತ
ಗದ್ದಲ ಸ್ವಲ್ಪ ಹೆಚ್ಚೇ ಇದ್ದಂತೆ ತೋರಿತು ನಾನು ನಡೆಯುವ ರೋಡ್
ನಲ್ಲಿ! ಆಗಲೇ ಹೊತ್ತಾಗಿತ್ತಲ್ವೇ ಮನೆಯಿಂದ
ಹೊರಬಿದ್ದಾಗ! ಶಿರಸ್ತ್ರಾಣ ಧರಿಸಿದ ಎಷ್ಟೋ ಜನ ಸೈನಿಕರಂತೆ ಒಬ್ಬರ
ಹಿಂದೊಬ್ಬರು ತಮ್ಮ ಕುದುರೆಗಳಲ್ಲಿ, ರಥಗಳಲ್ಲಿ
ಬಿರಬಿರನೆ ಹೋಗುತ್ತಿದ್ದರು. ಆದರೆ ಈ ಸಲ
ಎಲ್ಲ ಸವಾರರು ತಮ್ಮ ಸಮವಸ್ತ್ರ ತೊಟ್ಟಿರಲಿಲ್ಲ,
ಕೆಲವರಷ್ಟೇ! ಅವರ ಹಿಂಬಾಗದಲ್ಲಿ ಅಥವಾ
ಬದಿಯಲ್ಲಿ ಈ ಸಲ ಸಮವಸ್ತ್ರ
ಧರಿಸಿದ್ದ ಪುಟ್ಟ ಸೈನಿಕರಿದ್ದರು. ಅವರ ಹಿಂಬದಿಯಲ್ಲಿ ಪಕ್ಕದಲ್ಲಿ
ದೊಡ್ಡ ಚೀಲಗಳಿದ್ದವು. ಅವುಗಳಲ್ಲಿ ಗನ್ನು ಬಾಂಬುಗಳು ಇದ್ದಿರಬೇಕು! ಕೆಲವೊಂದು ಚೀಲಗಳಂತೂ ದೊಡ್ಡದೂ, ಭಾರವೂ ಇದ್ದಿತು. ನನಗಂತೂ ಇವುಗಳನ್ನು ಕಂಡು ದಿಗಿಲಾಯಿತು. ಇವೇನು
ಮಾರಾಕಾಸ್ತ್ರಗಳೋ? ಮತ್ತೆ ಅಂತರ್ಯುದ್ಧವೇನಾದರೂ ಶುರುವಾಗಿದೆಯೋ? ನಮ್ಮ ಭೂತ ಪೂರ್ವ ಪ್ರಧಾನಿಯೊಬ್ಬರನ್ನು ಇಂತಹದೇ
ಚೀಲ ಹಿಡಿದು ಕನ್ನಡಕ ಧರಿಸಿದ ಸ್ತ್ರೀಯೊಬ್ಬಳು ಬಾಂಬು ಸಿಡಿಸಿ ಕೊಂದ ಘಟನೆ ಕಣ್ಣೆದುರಿಗೆ
ಬಂದು ಎದೆ ಝಲ್ಲೆಂದಿತು! ಇವರೇನಾದರೂ ನನ್ನನ್ನು ಪ್ರಧಾನಿಯೆಂದುಕೊಂಡು ಬಿಟ್ಟರೆ? ಎಲ್ಲ ಕಡೆಯಿಂದ
ಸವಾರರು ನನ್ನೆಡೆಗೇ ಬರುವುದು ಕಂಡು, "ನಾನು ಪ್ರಧಾನಿಯೂ ಅಲ್ಲ, ರಾಷ್ಟ್ರಾಧ್ಯಕ್ಷನೂ ಅಲ್ಲ.
ಈ ಜನ್ಮದಲ್ಲಿಯೇ ಏನು, ಇನ್ನು ಮುಂದಿನ ಏಳೇಳು ಜನ್ಮದಲ್ಲೂ ಹಾಗೇನು ಆಗುವ ಬಯಕೆಯೂ ಇಲ್ಲ" ಎಂದು
ಜೋರಾಗಿ ಕಿರುಚಿ ಹೇಳೋಣವೆಂದು ತೋರಿತು. ಆಗಲೇ ಒಂದು ಕುದುರೆಯ ಹಿಂಬದಿಯಲ್ಲಿ ಕುಳಿತಿದ್ದ ಪುಟ್ಟ ಸವಾರನೊಬ್ಬನು
ನನ್ನ ಕಡೆ ತಿರುಗಿ ಮುಗುಳ್ನಕ್ಕನು. ಬಾಯಿಗೆ ಬಂದ ಜೀವ ಮತ್ತೆ ಸ್ವಸ್ಥಾನ ಸೇರಿತು.
ಎಲ್ಲ
ಸವಾರರು ತಮ್ಮ ಪುಟ್ಟ ಸಹ
ಸವಾರರನ್ನು ತಮ್ಮ ವಾಹನಗಳಿಂದ ಇಳಿಸಿ
ಒಂದು ದೊಡ್ಡ ಗೇಟ್ ನೊಳಗೆ ಕಳಿಸಿ
ಕೊಡುತ್ತಿದ್ದರು. ಒಬ್ಬರನ್ನು ನಿಲ್ಲಿಸಿ ಕೇಳಿದೆ, "ಏನು ನಡೆಯುತ್ತಿದೆ ಇಲ್ಲಿ?"
ಅವನೋ ನನ್ನ ಸೋದರ ಸಂಭಂದಿಯಂತೆ
ನಗುತ್ತ, "ಹೇ, ನಿನಗೆ ನೆನಪಿಲ್ಲವೇ?
ಮೊನ್ನೆ ಸಿಕ್ಕಿದ್ದೆವಲ್ಲ ರಸ್ತೆಯಲ್ಲಿ ಆಫೀಸ್ಗೆ ಹೋಗುತ್ತಾ ಇರುವಾಗ. ಹೇಗಿದ್ದಿ ಗೆಳೆಯ?" ಅಂದ. ನಾನು "ಹೊ
ಹೌದಲ್ಲವೇ! ನಾನು ಚೆನ್ನಾಗಿದ್ದೇನೆ. ನೀವು?"
ಎಂದೆ. ಅವನು ಹೇಳಿದ, "ನಾನು
ಚೆನ್ನಾಗಿದೀನಿ. ನೀನು ಏನು ನಡೆಯುತ್ತಿದೆಯೆಂದು
ಕೇಳಿದಿಯಲ್ಲವೇ? ಇಲ್ಲಿ ನಡೆಯುತ್ತಿರುವುದು ತರಬೇತಿ. ಯುದ್ಧಕ್ಕೆ."
ನನ್ನ
ಮುಖ ಮತ್ತೆ ಕಳೆಗುಂದಿತು. ಹೌದು, ಹಾಗಿದ್ದಲ್ಲಿ ನಾನು ಹಾಕಿದ ಲೆಕ್ಕ ಸರಿಯಾಗೇ ಇದೆ. ಇವತ್ತಲ್ಲದಿದ್ದಲ್ಲಿ ನಾಳೆ ಮೂರನೇ
ಮಹಾಯುದ್ಧ ನಡೆದೇ ನಡೆಯುತ್ತದೆ. ಅದಕ್ಕೆ ಇರಬೇಕು ಈ ತರಬೇತಿ. ಅವನಂದ,
"ಗೆಳೆಯ, ನೀನು ಅಂದು ಕೊಂಡಂತೆ
ಮಹಾಯುದ್ಧಕ್ಕಲ್ಲ ಈ ತರಬೇತಿ, ಇದು
ದೈನಂದಿನ ಯುದ್ಧಕ್ಕೆ. ನಮ್ಮ ದೈನಂದಿನ ಯುದ್ಧಕ್ಕೆ
ಇಲ್ಲಿ ತರಬೇತಿ ಪಡೆದು ಸರ್ಟಿಫಿಕೇಟ್ ಗಿಟ್ಟಿಸಿ ಕೊಳ್ಳದಿದ್ದಲ್ಲಿ ಯುದ್ಧ ನಡೆಯುವ ಮುನ್ನವೇ ಪರಾಜಿತರಾದಂತೆ." ನಾನು ಇನ್ನೊಂದು ಪ್ರಶ್ನೆ
ಕೇಳುವ ಮೊದಲೇ ಅವನು, "ನಿನಗೂ ಮದುವೆಯಾಗಿ ಮಕ್ಕಳಾದಾಗ ಅರ್ಥವಾಗುತ್ತದೆ ಬಿಡು. ನನಗೆ ನನ್ನ ಇಂದಿನ
ಯುದ್ಧಕ್ಕೆ ತಡವಾಗಿದೆ. ಮತ್ತೆ ಸಿಗೋಣ ಗೆಳೆಯ." ಅವನು ಅಂದಷ್ಟೇ ವೇಗದಲ್ಲಿ
ತನ್ನ ರಥವೇರಿ ಮಾಯವಾದ.
ನಾನೋ ಏನೋ ತಿಳಿದುಕೊಂಡಂತೆ
ಒಂದೆಡೆ, ಕಳೆದುಕೊಂಡಂತೆ ಇನ್ನೊಂದೆಡೆ ಜೀವನ ದರ್ಶನವಾದಂತೆ ಪಕ್ಕದ
ದರ್ಶಿನಿಯೊಳಗೆ ಹೊಕ್ಕು "ಒಂದು ಪ್ಲೇಟ್ ಇಡ್ಲಿ
ವಡೆ" ಎಂದು ಐವತ್ತರ ನೋಟನ್ನು
ಕ್ಯಾಷಿರ್ ಮುಂದೆ ಹಿಡಿದೆ.
No comments:
Post a Comment