Thursday, 1 May 2025

ವಿಠ್ಠಲ ರುಕುಮಾಯಿಯ ಧ್ಯಾನ



ಕಾಶಿಯ ವಿಶ್ವನಾಥನಷ್ಟೇ ಹಳೆಯವ ಕಾಶಿಯ ಬಿಂದು ಮಾಧವ. ಗಂಗೆಯ ಪಂಚ ಗಂಗಾ ಘಾಟಿನಲ್ಲಿ ಮೂರಂತಸ್ತು ಮೆಟ್ಟಿಲೇರಿದರೆ ಎಡ ಪಕ್ಕದಲ್ಲಿ ಗೋಕರ್ಣ ಪರ್ತಗಾಳಿ ಮಠವು ಎದುರಿಗೆ ಆಲಂಗಿರ್ ಮಸೀದಿಯು ಬಲ ಪಕ್ಕದಲ್ಲಿ ಏರಿಯ ಹತ್ತಿರ ಅಶ್ವಥ ಮರವೂ ಒಂದು ಪುಟ್ಟ ಮಂದಿರವು ಕಾಣಿಸುತ್ತದೆ. ಇದೆ ಬಿಂದು ಮಾಧವ ದೇವಸ್ಥಾನ. ಇಲ್ಲಿ ವಿಶ್ವನಾಥನಷ್ಟು ಅಬ್ಬರವಾಗಲಿ, ದರ್ಶನಕ್ಕೆಂದು ಬಂದ ಜನರ ಪ್ರವಾಹ ಎರಡೂ ಇಲ್ಲ. ಮಹಾಕುಂಭದ ಈ ಸಂದರ್ಭದಲ್ಲಿ ಕಾಶಿಯ ವಿಶ್ವನಾಥನನ್ನು ನೋಡಲು ಘಂಟೆ ಗಟ್ಟಲೆ ಕಾದ ನಮಗೆ ಬಿಂದು ಮಾಧವನ ಸುಲಭ ದರ್ಶನ ಹಾಲು ತುಪ್ಪ ಸವಿದಷ್ಟೂ ಖುಷಿಯಾಗಿತ್ತು. 


ಹೀಗೆ ಬಿಂದು ಮಾಧವನ ದರ್ಶನ ಮಾಡಿ 'ಥಟೆರಿ ಬಾಝರ್' ಕಡೆಗಿನ ಗಲ್ಲಿಯಲ್ಲಿ ಹೋಗುತ್ತಿದ್ದಾಗ 'ವಿಠ್ಠಲ ಮಂದಿರ' ಎನ್ನುವ ಹೆಸರು ದಾರಿ ಗುರುತಿನೊಂದಿಗೆ ನಮ್ಮ ಕಣ್ಣಿಗೆ ಬಿತ್ತು. ನನ್ನ ಜೊತೆಗಿನ ಮಿತ್ರ ದೀಪಕ್ ಮರಾಠಿಗನಾದ್ದರಿಂದ ಈ ಮಂದಿರವೆನ್ನೊಮ್ಮೆ ನೋಡೋಣ ಎನಿಸಿ ಆ ಗುರುತನ್ನು ಹಿಂಬಾಲಿಸಿದೆವು. ಮುಂದೆಯೂ ಗಲ್ಲಿಗಳಲ್ಲಿ 'ವಿಠ್ಠಲ ಮಂದಿರ' ಹೆಸರಿನೊಂದಿಗೆ ದಿಕ್ಷೂಚಿಗಳಿದ್ದವು. ಅದನ್ನೇ ಅನುಸರಿಸಿ ಒಂದೆಡೆ ಬಂದರೆ ಅಲ್ಲಿ  ಅರ್ಧ ಬಾಗಿಲಿರುವ ಒಂದು ಮನೆಯಂತೆ ಕಾಣುವ ಕಟ್ಟಡವಿತ್ತು. ನಮಗೋ ಇದು ಮನೆಯೋ ಅಥವಾ ಮಂದಿರವೋ ಅನ್ನುವ ಅನುಮಾನ. ಯಾರನ್ನಾದರೂ ಕೇಳುವ ಎಂದರೆ ಆ ಪರಿಸರದಲ್ಲಿ ಯಾರೂ ಇರಲಿಲ್ಲ. ಸ್ನೇಹಿತ ಕೀರ್ತನ್ ಹೇಳಿದ "ಈ ಬಾಗಿಲು ದನಗಳು ಒಳ ಬರಬಾರದೆಂದು ಇಟ್ಟಿರಬೇಕು. ತೆರೆಯುವುದೋ ನೋಡೋಣ" ಎಂದು. ನಾನು ಸುಮ್ಮನೆ ಬಾಗಿಲನ್ನು ದೂಡಿದೆ. ಅದು ಹಾಗೆಯೇ ತೆರೆಯಿತು. ಒಳ ಹೋಗಿ ನೋಡಿದರೆ ಅಲ್ಲಿ ಮಂದಿರದ ಕುರುಹಿಲ್ಲ. ಬದಲಿಗೆ ಯಾವುದೊ ಹಳೆ ಮನೆಯ ರಿಪೇರಿ ನಡೆಯುತ್ತಿರುವಂತೆ ಟಾರ್ಪಲಿನ್ ಶೀಟ್ ಗಳು, ಮುರಿದು ಬಿದ್ದ ಸಾಮಾನು ಎಲ್ಲ ಕಾಣುತ್ತಿತ್ತು. ಅಲ್ಲೇ ಒಂದು ಚಿಕ್ಕ ಕಾಲ್ದಾರಿಯು ಇತ್ತು. ಇಲ್ಲಿಯವರೆಗೆ ಬಂದ ನಾವು ಪೂರ್ತಿ ನೋಡಿಯೇ ಬಿಡೋಣ ಎಂದು ನಾನು ಕಾಲ್ದಾರಿ ಕ್ರಮಿಸಿ ಕೊನೆಯವರೆಗೂ ಹೋಗಿ ನೋಡಿದೆ. ಅರೆ ಏನಾಶ್ಚರ್ಯ! ಆ ದಾರಿಯ ಕೊನೆಗೆ ಗಂಗೆಯನ್ನು ಮುಖ ಮಾಡಿ ಕೊಂಡು ಒಂದು ಪುಟ್ಟ 'ವಿಠ್ಠಲ ರುಕುಮಾಯಿ' ಮಂದಿರ ಇತ್ತು. ಗರ್ಭ ಗುಡಿಗೆ ಬಾಗಿಲು ಹಾಕಿದ್ದರು. ಆದರೆ ವಿಗ್ರಹಗಳನ್ನು ಬಾಗಿಲ ಮೂಲಕ ನೋಡಬಹುದಿತ್ತು.   ಗುಡಿಯ ಮುಂದೆ ಹತ್ತಾರು ಜನ ಕುಳಿತು ಕೊಳ್ಳಬಹುದಾದಷ್ಟು ಜಾಗವಿತ್ತು. ಗಂಗೆಯ ಕಡೆಗಿನ ಭಾಗಕ್ಕೆ ಟಾರ್ಪಾಲಿನ್ ಮುಚ್ಚಿದ್ದರು. ಯಾಕೆಂದರೆ ಆ ಕಡೆ ಮಂದಿರದ ಕಾಮಗಾರಿ ನಡೆಯುತ್ತಿತ್ತು. ನಾವು ಮೂವರು ದೇವರಿಗೆ ಸಾಷ್ಟಾಂಗ ನಮಸ್ಕರಿಸಿ ಅಲ್ಲಿಯೇ ಧ್ಯಾನಾಸಕ್ತರರಾಗಿ ಕುಳಿತೆವು. 


ಮಹಾಕುಂಭ ಈ ಸಂದರ್ಭದಲ್ಲಿ ಕಾಶಿಯೆಲ್ಲೆಡೆಯೂ ಜನವೋ ಜನ. ವಿಶ್ವನಾಥನ ದರ್ಶನಕ್ಕೆಂದು ಕಿಲೋ ಮೀಟರ್ಗಟ್ಟಲೆ ಸಾಲುಗಟ್ಟಿ ನಿಂತ ಜನ, ಗಂಗೆಯ ಎರಡು ದಡದಲ್ಲಿ ಸ್ನಾನ ಮಾಡುತ್ತಿರುವ ಜನ, ಗಂಗೆಯ ಮೇಲೆ ವಿಹರಿಸುತ್ತಿರುವ ನೂರಾರು ದೋಣಿಗಳು, ಕಾಶಿಯ ಗಲ್ಲಿಗಳಲ್ಲಿ ಅತ್ತಿಂದಿತ್ತ ಓಡಾಡುವ ಜನ, ಇವರ ಜೊತೆ ಪೈಪೋಟಿಗೆ ಹೊರಟವರಂತೆ ಹಾರ್ನ್ ಬಾರಿಸುತ್ತ ಓಡುತ್ತಿರುವ ದ್ವಿಚಕ್ರ ವಾಹನಗಳು. ಹೀಗೆಯೇ ಎಲ್ಲಿ ನೋಡಿದರಲ್ಲಿ ದಿನದ ಯಾವುದೇ ಸಮಯದಲ್ಲಿ ಸದಾ ಗಿಜಿಗುಡುತ್ತಿರುವ ಕಾಶಿ ನಗರ. ಆದರೆ ವಿಠ್ಠಲ ರುಕುಮಾಯಿ ಮಂದಿರದ ಈ ಒಂದು ಜಾಗದಲ್ಲಿ ನಮಗೆ ಅದಾವುದರ ಕಾಟವಿರಲಿಲ್ಲ. ಇಲ್ಲಿ ಜನರೂ ಇಲ್ಲ ಸದ್ದೂ ಇಲ್ಲ. ಇಂತಹ ಪರಿಸರದಲ್ಲಿ ನಾವು ಮೂವರು ಧ್ಯಾನ ಮಾಡುತ್ತಾ, ಸುಮ್ಮನೆ ಕೂರುತ್ತಾ ಸುಮಾರು ಒಂದು ಘಂಟೆಯ ಸಮಯ ಕಳೆದಿರಬಹುದು, ಅಷ್ಟ್ರಲ್ಲಿ ಮಂದಿರದ ಅರ್ಚಕನು ಬಂದು ಗರ್ಭ ಗುಡಿ ತೆರೆದು ಒಳ ಹೊಕ್ಕನು. ಅವನಲ್ಲಿ ನಾನು, "ಈಗ ಪೂಜೆ ನಡೆಯುದೇ?" ಎಂದು ಕೇಳಿದೆ. ಅದಕ್ಕವನು ಪೂಜೆ ಬೆಳಗ್ಗೆಯೇ ಆಗಿದೆ, ನಿಮಗೆ ಪೂಜೆ ನೋಡುವುದಿದ್ದರೆ ನಾಳೆ ಬೆಳಗ್ಗೆ ೭:೩೦ ಕ್ಕೆ ಬನ್ನಿ ಎಂದನು. ಹಾಗೆಯೇ ಪೂಜೆಯ ಪ್ರಸಾದ ತೆಗೆದುಕೊಳ್ಳಿ ಎಂದು ನಮ್ಮಗಳ ಕೈಯಲ್ಲಿ ಪ್ರಸಾದವನ್ನಿಟ್ಟು ಗರ್ಭ ಗುಡಿಗೆ ಬೀಗ ಜಡಿದು ಹೊರಟನು. 

ನಾವು ಪ್ರಸಾದ ತಿಂದು ಧನ್ಯತಾ ಭಾವದಿಂದ ಮಂದಿರದಿಂದ ಹೊರ ಬಂದು 'ಥಟೆರಿ ಬಾಝರ್' ಕಡೆಗೆ ಹೆಜ್ಜೆ ಹಾಕಿದೆವು.

No comments:

Post a Comment