ರಣರಣ ಬಿಸಿಲು. ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಹೊರಟಿದ್ದರು. ಅದೇ ಗತಿ, ಅದೇ ಚಲನೆ. ನಿಧಾನವಾಗಿ ಮುಂದುವರೆಯುತ್ತಿದ್ದರೂ ಏನೋ ಆತುರದಲ್ಲಿದ್ದಂತೆ ತೋರುತ್ತಿತ್ತು. ಹಲವರು ತಮ್ಮ ಕುದುರೆಗಳನ್ನೇರಿ ಹೊರಟಿದ್ದರೆ, ಇನ್ನೂ ಕೆಲವರು ತಮ್ಮ ರಥಗಳನ್ನೇರಿ ಚಲಿಸುತ್ತಿದ್ದರು. ಹಲವು ಕುದುರೆಗಳಲ್ಲಿ ರಾಜನೊಬ್ಬನೇ ತನ್ನ ಶಿರಸ್ತ್ರಾಣದೊಂದಿಗೆ ಹೋಗುತ್ತಿದ್ದರೆ, ಕೆಲವೊಂದರಲ್ಲಿ ರಾಣಿಯರೂ ಜೊತೆಗಿದ್ದರು.
ಕವಚವನ್ನು ಧರಿಸಿ ನಡೆದಿದ್ದ ಒಬ್ಬ ಕುದುರೆ ಸವಾರನನ್ನು ನಿಲ್ಲಿಸಿ ಕೇಳಿದೆ, "ಎತ್ತಣ ಈ ಓಟ? ಜಾತ್ರೆ ಏನಾದರು ನಡೆಯುತ್ತಿದೆಯೇ?". ಅವನೋ ಬತ್ತಳಿಕೆಯಿಂದ ಬಾಣವನ್ನೇ ತೆಗೆಯದೆ ನನ್ನೆದೆಗೆ ಇರಿಯುವಂತಹ ನೋಟವನ್ನು ಬೀಸಿ ಕೇಳಿದ "ನಿನಗಿದು ಜಾತ್ರೆಯ ಜನಜಂಗುಳಿಯಂತೆ ಕಾಣುತ್ತಿರುವುದೇನು?". ನಾನಂತು ನೂರು ಜನ್ಮಗಳ ಪಾಪವನ್ನು ಒಮ್ಮೆಲೇ ಮಾಡಿದಂತೆ ನನ್ನ ಕಣ್ಣುಗಳನ್ನು ತಗ್ಗಿಸಿದೆ. ಅವನಂದ "ನಾವೆಲ್ಲಾ ಹೊರಟಿರುವುದು ಯುಧ್ಧಕ್ಕೆ". ಅವನ ದನಿ ಗಡುಸಾಗಿತ್ತು.
ನನ್ನೆದೆ ಝಲ್ಲೆಂದಿತು! ಯುಧ್ಧವೇ? ಇಷ್ಟೊಂದು ಜನ ಯಾರ ಮೇಲೆ ದಾಳಿ ಮಾಡಲು ಹೊರಟಿಹರೋ? ಒಂದು ವೇಳೆ ವಿಶ್ವ ಯುಧ್ಧವೇ ಆರಂಭವಾಗಿದ್ದರೆ ನನ್ನ ಗತಿಯೇನು? ನನ್ನ ಜೀವನ ಈಗಷ್ಟೇ ಶುರುವಾಗಿದೆ, ಮಾಡಲು ಬಹಳಷ್ಟಿದೆ.
ಇಬ್ಬರು ಮಕ್ಕಳು, ಒಬ್ಬಳು ಹೆಂಡತಿ.
ಒಂದು ಅಲ್ಲ ಎರಡೋ ಮೂರೋ ಭಡ್ತಿ.
ಟುಬಿಎಚ್ಕೆ ಫ್ಲ್ಯಾಟು, ಒಂದು ಹ್ಯಾಚ್ಬ್ಯಾಕ್ ಕಾರು.
ಹಾ ಹೌದು, ಒಂದು ಸಿಂಗಾಪುರ್ ಟೂರು.
ಇಬ್ಬರು ಮಕ್ಕಳು, ಒಬ್ಬಳು ಹೆಂಡತಿ.
ಒಂದು ಅಲ್ಲ ಎರಡೋ ಮೂರೋ ಭಡ್ತಿ.
ಟುಬಿಎಚ್ಕೆ ಫ್ಲ್ಯಾಟು, ಒಂದು ಹ್ಯಾಚ್ಬ್ಯಾಕ್ ಕಾರು.
ಹಾ ಹೌದು, ಒಂದು ಸಿಂಗಾಪುರ್ ಟೂರು.
ಇದಕ್ಕಿಂತ ಮುಂಚೆಯೇ ಇಲ್ಲಿ ಪರಮಾಣು ದಾಳಿಯೇನಾದರೂ ನಡೆದರೆ ನಾನೇನಪ್ಪಾ ಮಾಡುವುದು? ಇವರೆಲ್ಲ ಇಷ್ಟು ತರಾತುರಿಯಿಂದ ಸಜ್ಜಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದರೆ "ತೀರ್ಮಾನದ ದಿನ" ಬಂದೆ ಬಿಟ್ಟಿತೆಂದು ತೋರುತ್ತದೆ.
ಅವನಿಗೆ ನನ್ನ ಪರಿಸ್ಥಿತಿ ನನ್ನ ಮೋರೆಯಿಂದ ತಿಳಿದಿರಬೇಕು, ಅವನಂದ "ಯುದ್ಧವೆಂದರೆ ವಿಶ್ವಯುದ್ಧವಲ್ಲ. ಇದು ದೈನಂದಿನ ಯುಧ್ಧ. ಇವತ್ತಿನ ನನ್ನ ಯುಧ್ಧ ನನ್ನದೇ ಮಹತ್ವಾಕಾಂಕ್ಷೆಯೊಂದಿಗೆ. ಇವತ್ತು ನನಗೆ ರೇಟಿಂಗ್ ಕೊಡುತ್ತಾರೆ. ನಾನು ಇವತ್ತು ಗೆದ್ದು ಬಿಟ್ಟರೆ ಮುಂದಿನ ಒಂದು ವರ್ಷ ನೆಮ್ಮದಿ. ಇಲ್ಲದಿದ್ದಲ್ಲಿ ಇನ್ನೊಂದು ಯುಧ್ಧ ಶುರು, ಕೆಲಸ ಹುಡುಕುವ ಯುಧ್ಧ".
"ಹೀಗೆಯೇ ಈ ಮಾರ್ಗದಲ್ಲಿರುವ ಪ್ರತಿಯೊಬ್ಬರೂ ಏನಾದರೊಂದು ಯುದ್ಧವನ್ನು ಮಾಡಲೇ ಹೊರಟಿಹರು. ನನ್ನ ಮುಂದಿರುವವನು ತನ್ನ ಬಾಸ್ ನೊಂದಿಗೆ, ಆಗೋ ನೋಡು ನನ್ನ ಪಕ್ಕದಲ್ಲಿರುವವನು ತನ್ನ ಸಹಚರನೊಂದಿಗೆ, ಒಬ್ಬ ತನ್ನ ಭಯದೊಂದಿಗೆ, ಇನ್ನೊಬ್ಬ ತನ್ನ ಸ್ಪರ್ಧೆಯೊಂದಿಗೆ, ಮತ್ತೊಬ್ಬ ತನ್ನ ಮೋಹದೊಂದಿಗೆ. ಹೀಗೆಯೇ ಈ ಮಾರ್ಗದಲ್ಲಿನ ಪ್ರತಿಯೊಬ್ಬರೂ ಪ್ರತಿದಿನ ಏನಾದರೊಂದಿಗೆ ಯುಧ್ಧ ಮಾಡುತ್ತಲೇ ಇರುವರು. ಇದೆ ನಮ್ಮ ಕಾಯಕ".
"ನೀನೋ ಮೊದಲನೇ ದಿನ ಯುಧ್ಧಕ್ಕೆ ಹೊರಟಂತೆ ತೋರುತ್ತಿದೆ. ನೀನು ಈ ಯುಧ್ಧಕ್ಕೆ ಚೆನ್ನಾಗಿ ಅಣಿಯಾಗಿ ಹೋದರೆ ಒಳಿತು. ಆಗೋ ನೋಡು ನನ್ನ ರಣರಂಗ ಅಲ್ಲಿ ಕಾಣಿಸುತ್ತಿದೆ. ನಾನೀಗ ಹೊರಟೆ. ಸಾಯಂಕಾಲ ಮತ್ತೆ ಸಿಕ್ಕಾಗ ನನ್ನ ಇಂದಿನ ಯುಧ್ಧ ಹೇಗಿತ್ತೆಂದು ಹೇಳುತ್ತೇನೆ. ಬೇರೆಯವರ ಕಥೆಯನ್ನೂ ಕೇಳುವಿಯಂತೆ, ಹಾಗೆ ನಿನ್ನ ಕಥೆಯನ್ನು ಹೇಳುವಿಯಂತೆ. ಕೇಳಲು ಬಹಳ ಮಜವಾಗಿರುತ್ತದೆ. ಅವರವರ ಯುಧ್ಧ ಅವರವರಿಗೆ ವಿಶ್ವ ಯುಧ್ಧಕ್ಕಿಂತ ಕಡಿಮೆಯೇನಲ್ಲ."
"ಸಾಯಂಕಾಲ ಮತ್ತೆ ಸಿಗೋಣ. ನನಗೆ ವಿಜಯವಾಗಲಿ ಎಂದು ಆಶೀರ್ವದಿಸು. ನಿನಗೂ ಜಯ ಸಿಗಲಿ, ವೀರ".
- at Bangalore Dairy Circle on a working day!
No comments:
Post a Comment